Monday, December 14, 2009

ಕನ್ನಡ ನಾಡು



ಚಿನ್ನದ ನಾಡು ಗಂಧದ ಬೀಡು
ಜೇನಿನ ಗೂಡಿದು ಕನ್ನಡವು
ಸುಂದರ ವನಗಳ ಚೆಂದದ ಹೊಲಗಳ
ಚೆಲುವಿನ ನಾಡಿದು ಕನ್ನಡವು

ಜುಳು ಜುಳು ಹರಿಯುವ ತೊರೆಗಳ ಕಲರವ
ಮೊರೆಯುವ ನಾಡಿದು ಕನ್ನಡವು
ತೆಂಗು ಕಂಗು ಬಾಳೆ ತಾಳೆಗಳ
ತೋಟದ ಸೊಬಗಿನ ಕನ್ನಡವು

ನವಿಲಿನ ನರ್ತನ ಕೋಗಿಲೆ ಕೂಜನ
ಶುಕಧ್ವನಿ ಮೊಳಗಿದ ಕನ್ನಡವು
ಕಪಿಗಳ ದಂಡು ಆನೆಯ ಹಿಂಡು
ಖಗ ಮೃಗ ತಳಕಿನ ಕನ್ನಡವು

ರಾಜಾಧಿರಾಜರು ಆಳಿದ ನಾಡು
ವೈಭವ ಮೆರೆದಿಹ ಕನ್ನಡವು
ಕವಿ ಪುಂಗವರು ಬಾಳಿದ ನಾಡು
ಸಾಹಿತ್ಯ ಸ್ಪೂರ್ತಿಯ ಕನ್ನಡವು

ಸಂಸ್ಕೃತಿ ಕಲೆಗಳು ತುಳುಕಿದ ನಾಡು
ಸುಖ ಶಾಂತಿ ನೆಲೆಸಿದ ಕನ್ನಡವು
ಶರಣರು ಸಂತರು ಬದುಕಿದ ನಾಡು
ಪುಣ್ಯ ಭೂಮಿಯಿದು ಕನ್ನಡವು
-ಆರ್. ಎಸ . ಚಾಪಗಾವಿ

Tuesday, December 8, 2009

ಬಾಲನ ಕರೆ ....


ಮೂಡಿದ ರವಿಯು
ಮುಳುಗುವ ಸಮಯಕೆ
ಗೂಡನು ಸೇರುವ ಹಕ್ಕಿಗಳೇ

ದಿನವಿಡೀ ಕಾಡಲಿ
ನಾಡಲಿ ಹಾರುತ
ಕಾಳನು ಅರಸುವ ಹಕ್ಕಿಗಳೇ

ವಿಧ ವಿಧ ಬಣ್ಣದಿ
ಮಧುರ ಸ್ವರದಲಿ
ಚಿಲಿ ಪಿಲಿಗುಟ್ಟುವ ಹಕ್ಕಿಗಳೇ

ಸಂಜೆಯ ಹೊತ್ತಲಿ
ನಿಮ್ಮೊಡನಾಡಲು
ಬರುತಿಹೆ ನಾನು ಹಕ್ಕಿಗಳೇ
***

Friday, December 4, 2009

ಸೂರ್ಯನಿಗೆ ನಮನ



ಸಹಸ್ರ ರಶ್ಮಿಯನು ಬೀರುವ
ಜಗದ ಕರ್ಮದ ಸಾಕ್ಷಿಯೇ
ತೇಜೋಮಯ ಪ್ರದೀಪ ನಿನ್ನಯ
ಚರಣಕನುದಿನ ನಮಿಸುವೆ


ಪುಂಜ ಪುಂಜದಿ ಬೆಳಕನೀಯುತ
ಮೂಡು ದಿಕ್ಕಲಿ ಮೂಡುವೆ
ಮತ್ತೆ ಏರುತ ಪ್ರಖರನಾಗುತ
ಭೂಮಿಯನ್ನು ಬೆಳಗುವೆ


ಹೊನ್ನ ಬಣ್ಣದ ಕಿರಣವೀಯು
ಮೋಡದೆಡೆಯಲಿ ಅಡಗುವೆ
ಮತ್ತೆ ಸಂಜೆಯ ತಂಪು ಕಂಪಲಿ
ಶರಧಿಯಾಚೆಗೆ ಇಳಿಯುವೆ


ಸಸ್ಯ ಪ್ರಾಣಿ ಸಂಕುಲವನೆಲ್ಲವ
ಕಾಲ ಕಾಲಕೆ ಬೆಳೆಸುವೆ
ಜಗದ ಜೀವಕೆ ಆರೋಗ್ಯ ಭಾಗ್ಯವ
ಕೊಡುವ ನಿನಗೆ ನಮಿಸುವೆ .

**

Thursday, November 19, 2009

ಚಂದಿರ ಬಾ ಬಾರೋ ..





ಮಾಮರದೆಡೆಯಲಿ

ಮೋಡದ ಮರೆಯಲಿ

ಚಲಿಸುವ ಚಂದಿರ ಬಾ ಬಾರೋ



ತಿಂಗಳ ಬೆಳಕಿನ
ತಂಪಿನ ಕಿರಣವ
ಬೀರುವ ಚಂದಿರ ಬಾ ಬಾರೋ


ಹೂವಿನ ಪರಿಮಳ
ತಣ್ಣನೆ ಗಾಳಿಯ
ಜೊತೆ ಸೇರುತ ನೀ ಬಾ ಬಾರೋ


ಅಮ್ಮನ ಜೊತೆಗೆ
ಹಾಡನು ಹಾಡುತ
ಕಾಯುವೆ ನಿನಗೆ ಬಾ ಬಾರೋ
***

Tuesday, November 10, 2009

ಉದಯವಾಗಲಿ



ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು.

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.


ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.

ಕವಿ : ಹುಯಿಲಗೋಳ ನಾರಾಯಣರಾಯರು

Wednesday, October 14, 2009

ನದಿ



ಕಲ ಕಲ ಸದ್ದನು
ಮಾಡುತ ಮೆಲ್ಲನೆ
ಹರಿಯುವ ಸುಂದರ ನದಿ

ನೀರವ ಕಾಡಿನ
ನಡುವೆ ಸಾಗುತ
ಸೇರುವೆ ಸಾಗರ ತುದಿ

ಸಾಗುವ ದಾರಿಗೆ
ವೇಗವ ಪಡೆಯುತ
ಧುಮ್ಮುಕ್ಕುವ ಝರಿ

ಲೋಕದ ಜನರ
ಜೀವನ ಬೆಳಗಲು
ಸಂಪದ ನೀಡುವ ನದಿ

ಪಾಪವ ಕಳೆಯೆ
ಸ್ನಾನವ ವಿರಚಿಸೆ
ಶುದ್ಧ ತೀರ್ಥವೀ ನದಿ
***

Tuesday, September 29, 2009

ಕುಂಬಳಕಾಯಿ



ದೊಡ್ಡ ದೊಡ್ಡ ಕುಂಬಳಕಾಯಿ
ಪೂಜೆಗೆ ಬೇಕು ಕುಂಬಳಕಾಯಿ

ಪಲ್ಯಕೆ ಬೇಕು ಕುಂಬಳಕಾಯಿ
ಮಜ್ಜಿಗೆ ಹುಳಿಗೆ ಕುಂಬಳಕಾಯಿ

ಅಜ್ಜನ ನೆನಪಿಗೆ ಕುಂಬಳಕಾಯಿ
ಅಜ್ಜಿಯ ತಿಥಿಗೆ ಕುಂಬಳಕಾಯಿ

ರುಚಿ ರುಚಿ ಹಲ್ವಕೆ ಕುಂಬಳಕಾಯಿ
ದೇಹದ ತಂಪಿಗೆ ಕುಂಬಳಕಾಯಿ
***

Monday, September 7, 2009

ವಿಮಾನ ..









ಗಗನದಿ ಹಾರುತ
ಸದ್ದನು ಮಾಡುತ
ಹೋಗುವ ಪುಟ್ಟ ವಿಮಾನ

ದೊಡ್ಡ ರೆಕ್ಕೆಯ
ಲೋಹದ ಹಕ್ಕಿಯೆ?
ಗಗನದಿ ಗಮಿಸುವ ವಿಮಾನ

ಊರಿಂದ ಊರಿಗೆ
ಕ್ಷಣದಲಿ ಸಾಗುವ
ಗಗನ ಗಾಮಿಯೆ ವಿಮಾನ

ದೇಶ ವಿದೇಶವ
ಸುತ್ತುತಾ ಬರಲು
ನೀ ಉಪಕಾರಿಯೇ ವಿಮಾನ

ಕಾಯುವೆ ನಾನು
ನಿನ್ನನು ಏರಲು
ಹಾರುವೆ ಮುಗಿಲೆಡೆ ವಿಮಾನ
***

Wednesday, August 26, 2009

ಚಕ್ಕುಲಿ..


ಚಕ್ಕುಲಿ ಚಕ್ಕುಲಿ
ಬಿಸಿ ಬಿಸಿ ಚಕ್ಕುಲಿ


ಅಮ್ಮನು ಮಾಡಿದ
ಗುಂಡನೆ ಚಕ್ಕುಲಿ


ಅಕ್ಕನು ಮಾಡಿದ
ಕಡ್ಡಿಯ ಚಕ್ಕುಲಿ

ಬಾಯಲಿ ಕರಗುವ
ಬೆಣ್ಣೆ ಚಕ್ಕುಲಿ


ಕೆಂಪಗೆ ಕರಿದ
ಗರಿ ಗರಿ ಚಕ್ಕುಲಿ


ಚಕ್ಕುಲಿ ಚಕ್ಕುಲಿ
ಬಿಸಿ ಬಿಸಿ ಚಕ್ಕುಲಿ
***

Tuesday, August 25, 2009

ಗಣಪನ ಹಬ್ಬ...



ಮಣ್ಣಿನ ಗಣಪನ
ವಿಗ್ರಹ ಮಾಡಿ
ಎತ್ತರ ಪೀಠದಿ ಕುಳ್ಳಿರಿಸಿ

ಬಗೆ ಬಗೆಯಲಿ
ಸಿಂಗರಿಸಿದ ಮಂಟಪ
ಅಂದದಿ ಊರಲಿ ಮೆರೆದಿರಲು

ಚಕ್ಕುಲಿ ಕಡುಬು
ಮೋದಕ ಪಾಯಸ
ಬಗೆಬಗೆ ಕಜ್ಜಾಯ ತಿನಿಸುಗಳು

ಕಬ್ಬು ಕಡಲೆ
ಅರಳು ಗರಿಕೆ
ಎಲ್ಲವ ಗಣಪನ ಮುಂದಿಡಲು

ಊರಿನ ಹಿರಿಯರು
ಕಿರಿಯರು ಗೆಳೆಯರು
ಮಾತೆಯರೆಲ್ಲ ಸೇರಿರಲು

ಹಾಡನು ಹಾಡಿ
ಆರತಿ ಬೆಳಗಿ
ಪೂಜೆಯ ಮಾಡಿ ಕೈಮುಗಿದು

ಸರತಿಯ ಸಾಲಲಿ
ಎಲ್ಲರು ನಿಲ್ಲಲು
ಪಂಚಕಜ್ಜಾಯ ವಿತರಿಸಲು

ವಿಧ ವಿಧ ಆಟವ
ಆಡುತ ಜನರು
ಮೋದದಿ ಎಲ್ಲ ಸೇರುತಲಿ

ಗಣಪನ ಹಬ್ಬಕೆ
ಊರಿಗೆ ಊರೇ
ಸಡಗರದಿಂದ ನೆರೆದಿತ್ತು
***

Thursday, August 20, 2009

ಬೆಳವಣಿಗೆ..



ಹನಿ ಹನಿ ಸೇರಿ
ದೊಡ್ಡ ಶರಧಿಯಾಯಿತು



ಕಾಳು ಕಾಳು ಸೇರಿ
ದೊಡ್ಡ ಕಣಜವಾಯಿತು



ದಿನ ದಿನವು ಉಳಿಸೆ
ಹಣದ ಮೊತ್ತವಾಯಿತು



ದೀಪದಿಂದ ದೀಪ ಬೆಳಗಿ
ಬೆಳಕು ಹೆಚ್ಚಿತು



ದಿನಕ್ಕೊಂದು ವಿಷಯ ಕಲಿಯೆ
ಜ್ಞಾನ ಬೆಳೆಯಿತು .

***

Wednesday, August 12, 2009

ಜಾರುಬಂಡಿ

ಶಾಲೆಯ ಬದಿಯಲಿ
ಆಟದ ಬಯಲಲಿ
ಜಾರುಬಂಡಿಯ ಮಾಡಿಹರು


ಸಂಜೆಯ ವೇಳೆಗೆ
ಆಟದ ಸಮಯಕೆ
ಜಾರುವ ಆಟವನಾಡುವೆವು


ಗೆಳೆಯರು ನಾನೂ
ಬಂಡಿಯ ಮೇಲಕೆ
ಹತ್ತುತ ಜಾರುತಲಿರುತಿಹೆವು


ಆಡುತ ಕುಣಿಯುತ
ಪಾಠವ ಓದುತ
ಜಾಣರಾಗಿ ಬಾಳುವೆವು .

***

Tuesday, August 11, 2009

ಹಣ್ಣು ..



ರುಚಿ ರುಚಿ ರುಚಿಯ

ಕಿತ್ತಳೆ ಹಣ್ಣು


ಮರದಲಿ ಬೆಳೆಯುವ

ಮಾವಿನ ಹಣ್ಣು



ಗೊಂಚಲು ಗೊಂಚಲು

ದ್ರಾಕ್ಷಿಯ ಹಣ್ಣು


ಉದ್ದನೆ ಗೊನೆಯ

ಬಾಳೆಯ ಹಣ್ಣು


ಪುಟ್ಟನೆ ಗಿಡದಲಿ
ಪೇರಳೆ ಹಣ್ಣು



ನಾಲಿಗೆ ಹಿತಕೆ

ನೇರಳೆ ಹಣ್ಣು



ಗಟ್ಟಿ ದೇಹಕೆ

ಹಲಸಿನ ಹಣ್ಣು



ದಿನ ದಿನ ಸವಿಯುವ

ಒಳ್ಳೆಯ ಹಣ್ಣು

***


Monday, August 10, 2009

ಜೋಕಾಲಿ ..




ಆಲದ ಮರದ
ಬೀಳಲು ಹಿಡಿದು
ಜೋಕಾಲಿಯಾಡುವ ಬಾರಣ್ಣ



ಸರತಿಯ ಸಾಲಲಿ
ನಿಲ್ಲುತ ನಾವು
ಜೋಕಾಲಿ ಜೀಕುವ ಬಾರಣ್ಣ



ಅಮ್ಮನು ಕೊಟ್ಟಿಹ
ಕಡಲೆ ಮಿಠಾಯಿ
ಹಂಚುತ ತಿನ್ನುವ ಬಾರಣ್ಣ



ಸಂಜೆಯ ಹೊತ್ತು
ಮನೆಯನು ಸೇರುತ
ದೀವಪ ಬೆಳಗುವ ಬಾರಣ್ಣ
***

Sunday, August 9, 2009

ನರಿರಾಯ ...



ಮೇಲಕೆ ನೀನು
ನೋಡುತ ಏನು
ಹೊಂಚನು ಹಾಕುವೆ ನರಿರಾಯ ?



ಬಾನಲಿ ಹಾರುವ
ಹಕ್ಕಿಯ ಹಿಡಿಯುವ
ಯೋಚನೆ ನಿನ್ನದೆ ನರಿರಾಯ ?



ದ್ರಾಕ್ಷಿಯ ತೋಟದಿ
ಬಿಟ್ಟಿಹ ಹಣ್ಣನು
ಪಡೆಯಲು ಸೋತೆಯ ನರಿರಾಯ ?



ಹಾರುವ ಹಕ್ಕಿಯ
ಹಿಡಿಯಲು ನಿನಗೆ
ದಾರಿಯು ಹೊಳೆಯಿತೆ ನರಿರಾಯ ?

***

Friday, August 7, 2009

ಬಾವಲಿ



ಹಣ್ಣನು ಹುಡುಕುತ
ಹಾರುತ ಬರುವ
ದೊಡ್ಡ ರೆಕ್ಕೆಯ ಬಾವಲಿಯೇ



ರಾತ್ರಿಯ ಹೊತ್ತಲಿ
ವೇಗದಿ ಹಾರುತ
ಏನು ನಿನಗೆ ಗಲಿಬಿಲಿಯೇ ?



ಹಗಲು ಹೊತ್ತಲಿ
ಮರದಲಿ ಜೋಲುವೆ
ಗುಂಪಿನೊಳೇಕೆ ವಾಸಿಸುವೆ ?



ಬಾ ಬಾ ಬಾವಲಿ
ನಿನ್ನನು ನೋಡಿ
ಚಿತ್ರವ ನಾನು ಬಿಡಿಸುವೆ



ಓಡದೆ ನೀನು
ಇದ್ದರೆ ಒಂದೆಡೆ
ಹಣ್ಣನು ನಾನು ತಿನ್ನಿಸುವೆ !

***

Wednesday, July 29, 2009

ಅಕ್ಕನ ಮದುವೆ...



ಅಕ್ಕನ ಮದುವೆಗೆ
ಭಾರೀ ದಿಬ್ಬಣ
ಬೆಳಗ್ಗೆ ಬಂದಿತ್ತು


ತಮ್ಮನ ಕೂಡೆ
ಪುಟ್ಟನ ಸ್ವಾಗತ
ಭರ್ಜರಿ ನಡೆದಿತ್ತು


ಬ್ಯಾಂಡು ವಾಲಗ
ಸಂಭ್ರಮ ಸಡಗರ
ಚಪ್ಪರದೊಳಗಿತ್ತು


ಮಂಟಪ ತುಂಬ
ಹೂವಿನ ಪರಿಮಳ
ಮೆಲ್ಲನೆ ಹರಡಿತ್ತು


ಭಾವನು ಬಂದು
ಅಕ್ಕನ ಕೈಯ್ಯನು
ಹಿಡಿದೇ ಆಗಿತ್ತು


ಅಡುಗೆ ಭಟ್ಟರು
ಹಪ್ಪಳ ಹುರಿವ
ತಯಾರಿ ನಡೆದಿತ್ತು


ಎಲ್ಲರು ಕುಳಿತು
ಊಟವ ಮುಗಿಸಲು
ಮದುವೆ ಮುಗಿದಿತ್ತು .

***

Monday, July 27, 2009

ಇಲಿರಾಯ ...





ಮನೆಯ ಬಿಲದಲಿ

ವಾಸವ ಮಾಡುವ

ಉದ್ದನೆ ಬಾಲದ ಇಲಿರಾಯ



ತಿಂಡಿಯ ನಾನು

ಎಲ್ಲೇ ಇಟ್ಟರೂ

ರುಚಿಯನು ನೋಡುವ ಇಲಿರಾಯ !



ಮಕ್ಕಳು ಮರಿಗಳು

ಎಲ್ಲರ ಸೇರಿಸಿ

ಗುಲ್ಲನು ಎಬ್ಬಿಸೋ ಇಲಿರಾಯ



ವರ್ಷಕ್ಕೊಮ್ಮೆ ಬಂದರೆ

ನಿನ್ನನು ಚೌತಿಗೆ ಪೂಜಿಸುವೆ

ದಿನವೂ ಬಂದರೆ ಓಡಿಸುವೆ !


***

Monday, July 13, 2009

ಬಾಲ ಗೋಪಾಲ ...



ಬಾಲ ಗೋಪಾಲ ಸದಾನಂದ
ಹಾಲ ಕೊಡುವೆ ಬಾ ಗೋವಿಂದ


ಬೆಣ್ಣೆಯಿದೆ ತಕೋ ಯದುಚಂದ್ರ
ಹಣ್ಣು೦ಟಿಲ್ಲಿಯೆ ಗುಣಸಾಂದ್ರ


ಚಿನ್ನದ ಕೊಳಲಿದೆ ಬಾರಯ್ಯ
ಇನ್ನಾದರು ದಯ ತೋರಯ್ಯ


ಬಾಲ ಗೋಪಾಲ ಸದಾನಂದ
ಹಾಲ ಕೊಡುವೆ ಬಾ ಗೋವಿಂದ

***
(ನನ್ನ ಅಮ್ಮ ಮಕ್ಕಳನ್ನು ತೊಟ್ಟಿಲಲ್ಲಿ ತೂಗುವಾಗ ಹೇಳುತ್ತಿದ್ದ ಪದ್ಯ )

Saturday, July 11, 2009

ಮೊಲದ ಮರಿ ..




ಪೊದರಿನ ಬಳಿಯಲಿ

ಆಡುತಲಿರುವ ಮುದ್ದಿನ

ಮೊಲದ ಮರಿ



ಚಿಗುರೆಲೆ ಮೆಲ್ಲುತ

ಕಿವಿಯನು ನಿಮಿರಿಸಿ

ನೋಡುವುದೇಕೀ ಪರಿ ?



ಅಮ್ಮನ ಕೂಡುತ

ತಮ್ಮನ ಸೇರುತ

ಆಡಲು ಬರಲೇ ನಾನು?



ಕಾಡಿನ ಬಳಿಗೆ

ಓಡದೆ ನೀನು

ನನ್ನೊಡನಾಡುವೆಯೇನು ?


***

Thursday, July 9, 2009

ಹಣತೆ ...




ಸುತ್ತಲ ಕತ್ತಲೆ

ಕಳೆಯುತ ಬೆಳಕನು

ನೀಡುವ ಪುಟ್ಟ ಹಣತೆ



ಮಂದ ಪ್ರಕಾಶವ

ಬೀರುತ ನಿಂತಿಹೆ

ಸರತಿಯ ಸಾಲಿನಲೇಕೆ ?



ಚಂದಿರನಿರದ ರಾತ್ರಿಯ

ತುಂಬ ನಿನ್ನ

ಪ್ರಕಾಶವು ಸಾಕೆ ?



ನಿನ್ನಯ ಬಿಂಬವ

ನೋಡುತ ನಾನು

ಬರೆಯಲೇ ಒಂದು ಕವಿತೆ ?


***


Monday, July 6, 2009

ಅಜ್ಜನ ಮೀಸೆ ...



ಬೆಳ್ಳನೆ ಹತ್ತಿಯ
ಹೊಸೆದು ತೀಡಿದ
ಬತ್ತಿಯಂತೆ ಕಾಣುವುದು


ಮುದ್ದಿನ ಅಜ್ಜನ
ಮುಖದ ಮೇಲಿನ
ಬೆಳ್ಳನೆ ಮೀಸೆ ಹೊಳೆಯುವುದು


ಅಜ್ಜಿಗೆ ಭೀತಿ
ಅಜ್ಜಗೆ ಪ್ರೀತಿ
ಮುದ್ದಿನ ಮೀಸೆ ಬೆಳೆಯುವುದು


ಮೀಸೆಯ ಹೊತ್ತು
ನೆಟ್ಟನೆ ನಡೆಯುವ
ಅಜ್ಜನ ಆಸೆ ಫಲಿಸುವುದು !

***

Sunday, June 21, 2009

ನನ್ನಪ್ಪ ....



ಅಪ್ಪ ಅಪ್ಪ ನನ್ನಪ್ಪ
ಮುದ್ದು ಮಾಡುವ ನನ್ನಪ್ಪ



ವಿದ್ಯೆಯ ಕಲಿಸಿದ ನನ್ನಪ್ಪ
ಬುದ್ದಿಯ ಪೇಳಿದ ನನ್ನಪ್ಪ



ಶಿಸ್ತು ಕಲಿಸಿದ ನನ್ನಪ್ಪ
ಕಷ್ಟವ ಸಹಿಸಿದ ನನ್ನಪ್ಪ



ಜೀವನ ಸ್ಫೂರ್ತಿ ನನ್ನಪ್ಪ
ಭಾವ ಜೀವಿ ನನ್ನಪ್ಪ

***

Friday, June 19, 2009

ಹುಲಿ ಬಂತು ಹುಲಿ..




ಹುಲಿ ಬಂತು ಹುಲಿ

ದೊಡ್ಡ ಪಟ್ಟೆ ಹುಲಿ



ಬೇಟೆಯಾಡಿ ಹಸಿವು
ಕಳೆದು ಬಂದಿತೀಗ ಹುಲಿ



ಕಾಡಿನಿಂದ ಹೊರಗೆ

ಬಂದು ನಿಂದಿತೀಗ ಹುಲಿ



ಶಿಸ್ತಿನಿಂದ ಇರುವ ಕಲೆಯ

ಇದನು ನೋಡಿ ಕಲಿ


***

Thursday, June 18, 2009

ಜಿಂಕೆ ಮರಿ ...




ಪುಟ್ಟ ಪುಟ್ಟ
ಹೆಜ್ಜೆ ಇಟ್ಟು
ಬರುವ ಜಿಂಕೆ ಮರಿ



ಮೈಯ ತುಂಬ
ಚುಕ್ಕೆ ಇರುವ
ಪುಟ್ಟ ಜಿಂಕೆ ಮರಿ



ಎಲೆಯ ಚಿಗುರ
ಸವಿದು ಮೆಲುವ
ಮುದ್ದು ಜಿಂಕೆ ಮರಿ



ಕುಣಿದು ನಲಿದು
ಅಮ್ಮನೊಡನೆ ಬರುವ
ಜಾಣ ಮರಿ
***

Wednesday, June 17, 2009

ಆನೆ ಬಂತಣ್ಣ ...



ಆನೆ ಬಂತಣ್ಣ
ನಮ್ಮೂರಿಗೆ
ಆನೆ ಬಂತಣ್ಣ


ಪುಟ್ಟ ಕಣ್ಣಿನ
ಮೋಟು ಬಾಲದ
ಆನೆ ಬಂತಣ್ಣ


ಮೊರದ ಕಿವಿಯ
ನೀಳ ಸೊಂಡಿಲ
ಆನೆ ಬಂತಣ್ಣ


ದಪ್ಪನೆ ದೇಹದ
ಉದ್ದನೆ ದಂತದ
ಆನೆ ಬಂತಣ್ಣ


ಆನೆ ಬಂತಣ್ಣ
ನಮ್ಮೂರಿಗೆ
ಆನೆ ಬಂತಣ್ಣ

***

Tuesday, June 16, 2009

ಮಳೆ ಬಂತು ಮಳೆ...



ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ


ಮಣ್ಣಿನಲ್ಲಿ ಜಾರಿ ಬಿದ್ದು
ಬಟ್ಟೆಯಾಯ್ತು ಕೊಳೆ


ಬಿಸಿಲು ಬಂತು ಬಿಸಿಲು
ಕೋಟು ಟೋಪಿ ತೆಗೆ


ಬಾವಿಯಿಂದ ನೀರು ಸೇದಿ
ಸೋಪು ಹಾಕಿ ಒಗೆ

***

Monday, June 15, 2009

ಪುಟ್ಟ ಗುಬ್ಬಿ ..




ಗುಬ್ಬಿ ಗುಬ್ಬಿ

ಚಿಂವ್ ಚಿಂವ್ ಎಂದು

ಹಾರುತ ಬಂದಿಹೆಯಾ



ಸುರಿಯುವ ಮಳೆಯ

ನೀರಲಿ ನೆನೆದು

ನಡುಗುತ ನಿಂತಿಹೆಯಾ ?



ಬಾಗಿಲ ತೆರೆದು

ಕಾಳನು ಹಿಡಿದು

ನಿಂದಿಹೆ ನಾನೀಗ



ಬೇಗನೆ ಹತ್ತಿರ

ಹಾರುತ ಬಂದು

ಕಾಳನು ತಿನ್ನುವೆಯಾ?


***

Friday, June 12, 2009

ಯಾರು ಏನು ಮಾಡಬೇಕು?

ಕೊಕ್ಕೋ ಕೊಕ್ಕೋ ಕೋಳಿ
ಬೆಳಗಾಯ್ತು ಏಳಿ
ಚಿಂವ್ ಚಿಂವ್ ಇಲಿ
ಮಾಡಿನಿಂದ ಇಳಿ


ಅಂಬಾ ಅಂಬಾ ಕರುವೇ
ಹುಲ್ಲು ಹೊತ್ತು ತರುವೆ


ಮಿಯಾಂವ್ ಮಿಯಂವ್ ಬೆಕ್ಕೇ
ಕದ್ದು ಹಾಲು ನೆಕ್ಕೆ


ಬೌ ಬೌ ನಾಯಿ
ಸಾಕು ಮುಚ್ಚು ಬಾಯಿ


ಬುಸ್ ಬುಸ್ ಹಾವು
ಗೆಳೆಯರಲ್ಲ ನಾವು !

***


Thursday, June 11, 2009

ನಮ್ಮ ಕರು ....



ಅಮ್ಮನ ಕೆಚ್ಚಲ
ಹಾಲನು ಕುಡಿದು


ಬಾಲವ ಎತ್ತಿ
ಚಂಗನೆ ನೆಗೆದು


ಓಡುತ ಬರುವ
ನಮ್ಮ ಕರು


ಕೆಂಪನೆ ಬಣ್ಣದ
ನಮ್ಮ ಕರು


ಹಸಿರಿನ ಹುಲ್ಲನು
ಮೆಲ್ಲನೆ ಸವಿದು


ಕಿವಿಯನು ನಿಮಿರಿಸಿ
ಅಂಬಾ ಎಂದು


ಅಮ್ಮನ ಕರೆಯುವ
ನಮ್ಮ ಕರು


ಮುದ್ದಿನ ಪುಟಾಣಿ
ನಮ್ಮ ಕರು .

***

Tuesday, June 9, 2009

ಕಾಗೆ ...



ಕಾ ಕಾ ಕಾ ಎಂದು
ಕೂಗಿ ಹೇಳುವೆ


ನಾನು ಏಳುವ ಮೊದಲೇ
ನೀನು ಏಳುವೆ !


ದಿನವು ಬೆಳಗು ಸಂಜೆಯಲ್ಲಿ
ನೀನು ಕೂಗುವೆ


ಮಲಿನವನ್ನು ತೆಗೆದು ಶುಚಿಯ
ನೀನು ಮಾಡುವೆ


ಹೊಳೆವ ಕಪ್ಪು ಬಣ್ಣ ನಿನಗೆ
ಚೂಪು ಕೊಕ್ಕು ಅಂದ


ದಿನವು ಬಾರೋ ನೀನು
ಎಂದು ಕರೆವನೀಗ ಕಂದ

***

Saturday, June 6, 2009

ಮಂಗಣ್ಣ ...



ಗೋಡೆಯಾಚೆಗೆ ಇಣುಕಿ
ನೋಡುವೆಯೇನು ಮಂಗಣ್ಣ ?


ಕಾಡನು ಬಿಟ್ಟು ಇಲ್ಲಿಗೆ
ನೀನು ಬಂದ ಕಾರಣವೇನಣ್ಣ ?


ಹಸಿವೆಯ ನೀಗಿಸೆ ಹಣ್ಣುಗಳು
ಬೇಕೆ ನಿನಗೆ ಮಂಗಣ್ಣ ?


ಮೆಲ್ಲನೆ ಇಳಿದು ಹತ್ತಿರ ಬಂದರೆ
ಎಲ್ಲವ ಕೊಡುವೆ ನಿನಗಣ್ಣ

***

Wednesday, June 3, 2009

ಪುಟ್ಟನ ಕನಸು ...

ಪುಟಾಣಿ ಪುಟ್ಟ ನಿದ್ದೆಯಲೊಂದು
ಕಂಡ ಕನಸನ್ನು

ಅಣ್ಣನ ಕೂಡೆ ತಾರಾಲೋಕಕೆ
ಹೋದ ಕನಸನ್ನು

ಬೆಳ್ಳಿಯ ಚುಕ್ಕಿಯ ಮುಟ್ಟುತ
ಆಟವನಾಡಿದ ಕನಸನ್ನು

ಮೋಡದಿ ತೇಲುತ ಮೆಲ್ಲನೆ
ಮೇಲಕೆ ಜಿಗಿದ ಕನಸನ್ನು

ಓಡುತ ಆಡುತ ದಿನವಿಡೀ
ಕಳೆಯುತಲಿದ್ದ ಕನಸನ್ನು

ಪಕ್ಕನೆ ಅಮ್ಮನು ಕರೆದಂತಾಗೆ
ತೆಗೆದಾ ಮುಸುಕನ್ನು !
***

Tuesday, June 2, 2009

ಗುಡುಗು....



ಗುಡು ಗುಡು ಭೀಕರ
ಸದ್ದನು ಮಾಡುತ
ಬರುವುದೇಕೆ ಗುಡುಗು ?

ಜಡಿಮಳೆಯೊಂದಿಗೆ
ಸೇರುತ ಭೂಮಿಗೆ
ಬರುವುದೇಕೆ ಗುಡುಗು ?



ಎದೆಯಲಿ ಢವ ಢವ
ಕಸಿವಿಸಿ ಹೆದರಿಕೆ
ಮಾಡುವುದೇಕೆ ಗುಡುಗು ?



ತೊಡಗಲು ರೈತರು
ಗದ್ದೆಯ ಕೆಲಸಕೆ
ಕಾಡುವುದೇಕೆ ಗುಡುಗು ?
***

Monday, June 1, 2009

ಮಿಂಚು ...


ಬಾನಿನಿಂದ ತೆಗೆವ
ಛಾಯಚಿತ್ರವೇನು ಮಿಂಚು ?


ಹೊಳೆಯುತಿಹುದು ಗಗನವೊಮ್ಮೆ
ಯಾರದಮ್ಮ ಸಂಚು ?


ಕ್ಷಣಕ್ಕೊಮ್ಮೆ ಹೊಳೆದು
ಮಾಯವಾಗುವುದೀ ಮಿಂಚು


ನೋಡಿದರೆ ಕಾಣುವುದು
ಬಾನು ಭುವಿಯ ಅಂಚು

***

Tuesday, May 26, 2009

ಮಳೆ - ಬೆಳೆ ...



ಬಾನಿನಿಂದ ಭುವಿಗೆ ಬಂತು
ತುಂತುರು ಮಳೆ


ರೈತರೆಲ್ಲ ಹರುಷಗೊಂಡು
ಬೆಳೆದರೆಲ್ಲ ಬೆಳೆ


ಬೆಳೆಯು ಬೆಳೆಯೆ ಗದ್ದೆಯಿಂದ
ಹಸಿರಾಯ್ತು ಇಳೆ


ಕಳೆಯು ತೆಗೆಯೆ ಗದ್ದೆಯಿಂದ
ಶುದ್ಧವಾಯ್ತು ಬೆಳೆ

***

Saturday, May 16, 2009

ಮುಚ್ಚು ಮರೆಯಿಲ್ಲದೆಯೆ .....



ಮುಚ್ಚು ಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ ಅಂತರಾತ್ಮ ..ಮುಚ್ಚು..



ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ
ಗಂಗೆ ತಾನೋದ್ಭವಿಪ ನಿನ್ನಡಿಯ ಸೋಕಿಂಗೆ
ನರಕ ತಾನುಳಿಯುವುದೆ ನರಕವಾಗಿ ..ಮುಚ್ಚು ..



ಶಾಂತ ರೀತಿಯೊಳಿಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೊ ಓ ಅನಂತ
ನನ್ನ ನೀತಿಯ ಪುರುಡಿನಿಂದೆನ್ನ ರಕ್ಷಿಸೆ
ನಿನ್ನ ನೀತಿಯ ಬೆಳಕಿನ ಆನಂದಕ್ಕೆ ...ಮುಚ್ಚು ...

-ಕುವೆಂಪು

***

Wednesday, May 13, 2009

ಮಂಗಳ ಪದ್ಯ ...



ಜಲದಲಿ ಮತ್ಸ್ಯವತಾರನಿಗೆ

ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ

ಧರೆಯನುದ್ಧರಿಸಿದ ವರಾಹವತಾರಗೆ

ತರಳನ ಕಾಯ್ದ ನರಸಿಂಹನಿಗೆ

ಭೂಮಿಯ ದಾನವ ಬೇಡಿದಗೆ

ಆ ಮಹಾ ಕ್ಷತ್ರಿಯರ ಗೆಲಿದವಗೆ

ರಾಮಚಂದಿರನೆಂಬ ದಶರಥ ಸುತನಿಗೆ

ಭಾಮೆಯರರಸ ಗೋಪಾಲನಿಗೆ

ಬತ್ತಲೆ ನಿಂತಿಹ ಬೌದ್ಧನಿಗೆ

ಅರ್ತಿಯಿ೦ದ ಹಯವೇರಿದ ಕಲ್ಕ್ಯನಿಗೆ

ಹತ್ತವತಾರದಿ ಭಕ್ತರ ಪೊರೆಯುವ

ಅಚ್ಚ್ಯುತ ಪುರಂದರ ವಿಠಲನಿಗೆ . ಮಂಗಳಂ

-ಪುರಂದರದಾಸರು


(ಶಾಲೆಯಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿದ್ದ "ಭಜನೆ" ಯಲ್ಲಿ ಹಾಡುತ್ತಿದ್ದ ಮಂಗಳ ಪದ್ಯ )

***

Wednesday, May 6, 2009

ಎತ್ತಿನ ಗಾಡಿ ....


ಗಡ ಗಡ ಗಡ ಗಡ ಸದ್ದನು ಮಾಡಿ
ಬರುತಿದೆ ನೋಡಿ ಎತ್ತಿನ ಗಾಡಿ


ಎತ್ತುಗಳೆರಡನು ಮುಂದಕೆ ಹೂಡಿ
ಕೈಯಲಿ ಕೋಲನು ಹಿಡಿದರೆ ನೋಡಿ


ಎಳೆಯುತ ಗಾಡಿಯ ಮುಂದಕೆ ಓಡಿ
ತಲುಪಿಪ ಗುರಿಯ ತಾ ಜತೆಗೂಡಿ


ಹಿಗ್ಗನು ಕುಗ್ಗನು ಭಾಗವ ಮಾಡಿ
ಹೊರುವವು ನಮಗೆ ಸುಖವನು ನೀಡಿ


ಈ ಪರಿ ಗಾಡಿಯ ನೀತಿಯ ನೋಡಿ
ಲೋಕಕೆ ಪಾಠವ ಕಲಿಸುವ ಮೋಡಿ
****

Monday, May 4, 2009

ಕಾಡಿಗೆ ಹೋಗೋಣ .....



ತಂಪಿನ ಮರಗಳ
ಗುಂಪಿನ ಬಳಿಯ
ಕಾಡಿಗೆ ಹೋಗೋಣ .


ಬೆಳೆದ ಬಿದಿರ
ಮೆಳೆಗಳ ನೋಡುತ
ಆಟವನಾಡೋಣ


ಕಿಚ ಪಿಚ ಸದ್ದನು
ಮಾಡುವ ಹಕ್ಕಿಯ
ನೋಡೋಣ


ಕಾಡಲಿ ಸಿಗುವ
ಮಾವಿನ ಹಣ್ಣನು
ಹೆಕ್ಕುತ ಸವಿಯೋಣ


ಹಸಿರಿನ ಬನದ
ಅಂದವ ನೋಡಿ
ಪುಳಕಿತರಾಗೋಣ

***

Thursday, April 30, 2009

ಪುಟ್ಟ ಇರುವೆ



ಪುಟ್ಟದೊಂದು ಇರುವೆ
ಹೆಕ್ಕಿ ಚೂರು ಸಕ್ಕರೆ
ಹೋಗುತಿದೆ ತನ್ನ ಮನೆಗೆ
ಪುಳಕದಿಂದ ಆ ಕಡೆ


ಇರುವೇಗೆಕೆ ಸಕ್ಕರೆ
ಅಷ್ಟೊಂದು ಅಕ್ಕರೆ
ಪುಟ್ಟ ಚೂರು ಸಿಕ್ಕರೆ
ಬಿಡದೆ ಒಯ್ವುದಾಕಡೆ ?

ಒಮ್ಮೆ ಅಮ್ಮ ಸಿಕ್ಕರೆ
ನನ್ನ ನೋಡಿ ನಕ್ಕರೆ
ಪ್ರಶ್ನೆ ಕೇಳಿ ಬಿಟ್ಟರೆ
ಕೊಡುವಳೇನು ಉತ್ತರ ?
***

Monday, April 20, 2009

ಗೂಡಿನೆಡೆಗೆ ತೆರಳುವ .....



ಹೊತ್ತು ಹೋಯಿತು ಕತ್ತಲಾಯಿತು
ದಿನಪನಸ್ತಕೆ ಪೋದನು


ದಿನದ ಕೆಲಸದ ದಣಿವ ನೀಗಲು
ಬಾರೆ ನಾವು ಹೋಗುವ


ಬೆಳಕು ಕಳೆದುದು ದಿನವು ಮುಗಿದುದು
ಮೆಲ್ಲ ಮನೆಯನು ಸೇರುವ


ಅಳುವ ಮಕ್ಕಳು ಕಾಯುತಿರುವರು
ಗೂಡಿನಲ್ಲಿ ಮೆಲ್ಲನೆ


ಗುಟಕ ನೀಡುತ ಹಸಿವ ನೀಗುತ
ಸುಖದ ನಿದ್ದೆಗೆ ಜಾರುವ

***

Sunday, April 19, 2009

ಕೆರೆ ...



ಕೆರೆ ಕೆರೆ ನಮ್ಮ ಕೆರೆ

ಕುಡಿವ ನೀರು ಕೊಡುವ ಕೆರೆ

ದೇವರು ಸ್ನಾನ ಮಾಡುವ ಕೆರೆ



ಪುಟ್ಟ ಮೀನು ಇರುವ ಕೆರೆ

ದೊಡ್ಡ ಆಮೆ ಇರುವ ಕೆರೆ

ಸುತ್ತ ಮೆಟ್ಟಿಲು ಇರುವ ಕೆರೆ



ಕೆರೆ ಕೆರೆ ನಮ್ಮ ಕೆರೆ

ಊರಿಗೊಂದು ದೊಡ್ಡ ಕೆರೆ

ತಂಪು ನೀರು ಕೊಡುವ ಕೆರೆ

ನಮ್ಮ ನೆಚ್ಚಿನ ದೊಡ್ಡ ಕೆರೆ ..


***



Wednesday, April 1, 2009

ಪುಣ್ಯ ಕ್ಷೇತ್ರ ನೋಡಿದೆನು ....


ಪುಣ್ಯ ಕ್ಷೇತ್ರಕೆ ಹೋಗಿ

ನಾನು ಹರಕೆ ಮಂಡೆಯ

ನೀಡಿದೆನು



ಹರಿಯುವ ನದಿಯಲಿ ಸ್ನಾನವ

ಮಾಡಿ ದೇವರ ದರುಶನ
ಮಾಡಿದೆನು



ಸರತಿಯ ಸಾಲಲಿ ಮೊದಲಿಗನಾಗಿ

ಭೋಜನ ಶಾಲೆಯ

ಸೇರಿದೆನು



ಊಟವ ಮಾಡುತ ಕೈಗಳ

ತೊಳೆದು ಮೆಲ್ಲನೆ ಹೊರಗೆ

ಬಂದಿಹೆನು




ನಿಮ್ಮ ನಮ್ಮ ಎಲ್ಲರ

ದೇವನು ಪೊರೆಯಲಿ ಎಂದು

ಬೇಡಿದೆನು .

***

Friday, March 20, 2009

ಯಾಕೆ ಹೀಗೆ ....?



ಏನೋ ವಾಸನೆ ಬರುತಿದೆಯಲ್ಲ
ಪರಿಸರ ಮಲಿನ ಮಾಡಿದಿರಲ್ಲ ?
ಬದುಕುವುದೆಂತು ನಾವು ಮುಂದೆ ?


ಕುಡಿಯುವ ನೀರು ಸೇವಿಪ ವಾಯು
ಎಲ್ಲವೂ ಕಲುಷಿತವಾಗಿದೆಯಲ್ಲ ?
ನಿಮ್ಮ ಆಸೆಗೆ ನಮಗೇತಕೆ ಶಿಕ್ಷೆ ?


ನಿಮ್ಮಂತೆಯೇ ನಾವೂ ಅಲ್ಲವೇ ?
ಕಾಡು ಕಡಿದು ನಾಡು ಮಾಡಿ
ಎಲ್ಲವ ಕಶ್ಮಲ ಮಾಡಿದಿರಲ್ಲ ?


ಏನನು ಸಾಧಿಸ ಹೊರಟಿರಿ ನೀವು ?
ನಾಳೆಗೆ ಬದುಕುವ ಚಿಂತೆಯಿಲ್ಲವೇನು ?
ಎಲ್ಲ ವಿಷಮಯ ಮಾಡುವಿರಲ್ಲ ?

ಏನೋ ವಾಸನೆ ಬರುತಿದೆಯಲ್ಲ
ಪರಿಸರ ಮಲಿನ ಮಾಡಿದಿರಲ್ಲ ?
ಬದುಕುವುದೆಂತು ನಾವು ಮುಂದೆ ?
***

Tuesday, March 17, 2009

ಗೆಳೆಯನಿಗೆ ವಿದಾಯ ....



ನಡೆವೆ ನೀನು ಎನ್ನ ಬಿಟ್ಟು
ನಿನ್ನ ಬಾಳ ಗುರಿಯನು
ಸೇರಲೆಂದು ಜಗದ ಬಳಿಗೆ
ಎನ್ನ ಜೀವದ ಗೆಳೆಯನೆ

ಕಳೆದೆವೆ೦ತೊ ಹಲವು ದಿವಸ
ಕೂಡಿ ನಾವು ಹಿತದಲಿ
ಸರಸ ವಿರಸ ಕೊನೆಗೆ ಹರುಷ
ಕೂಡಿ ನಾವು ಹಂಚುತ

ಬಲಿತ ಹಕ್ಕಿ ಕಾಳು ಹೆಕ್ಕಿ
ತಿನ್ನಲೆಂದು ಹಾರುತ
ಮೇಲೆ ನೆಗೆವ ತೆರದಿ ನಾವು
ಜತೆಯ ಬಿಟ್ಟು ಅಗಲುತ
ಇರಲಿ ಪ್ರೀತಿ ಸ್ನೇಹವೆಂದು
ನಿರತ ನಮ್ಮಲೆನ್ನುತ
ಮರಳಿ ನಡೆವ ನಮ್ಮ ನೆಲೆಗೆ
ಸವಿಯ ನೆನಪ ಉಳಿಸುತ

***

Monday, March 16, 2009

ಲಾಟೀನು....


ನೀರವ ಕತ್ತಲೆ ಸಮಯದಲಿ
ಮಂದ ಪ್ರಕಾಶವ ಬೀರುತಲಿ
ನೀಡುವೆ ಬೆಳಕನು ನಮಗಾಗಿ


ಕಪ್ಪನೆ ಬುರುಡೆಗೆ ಎಣ್ಣೆಯ
ತುಂಬಿಸಿ ಬತ್ತಿಯೇರಿಸಿ ಹೊತ್ತಿಸುವೆ
ಮೆತ್ತಗೆ ನೀನು ಪ್ರಕಾಶಿಸುವೆ


ಇರುಳಿನ ದಾರಿಗೆ ದೀಪವಾಗುತ
ಕಳೆಯುವೆ ಕತ್ತಲೆ ನಮಗಾಗಿ
ಮೆಲ್ಲನೆ ಹೊಗೆಯ ಹೊರಸೂಸಿ


ಕಿರುನಗೆ ಸೂಸುತ ಬೆಳಗುತಲಿರುವೆ
ನಮ್ಮಯ ಬಾಳಿನ ಬೆಳಕಾಗಿ
ನಿಶೆಗೆ ನೀನು ರಿಪುವಾಗಿ

****

Wednesday, March 11, 2009

ಕ್ಷೌರ

ಭಾನುವಾರ ರಜೆಯು ಬರಲು
ಹೋಗುವೆ ಕ್ಷೌರಿಕನಂಗಡಿಗೆ
ಬೆಳೆದ ಕೂದಲ ತೆಗೆಸಲು
ನಾನು ಸಾಗುವೆ ಕ್ಷೌರಿಕನಂಗಡಿಗೆ

ತಿರುಗುವ ಕುರ್ಚಿಯ ಮೇಲೆ
ಕುಳಿತು ತಲೆಯನೊಪ್ಪಿಸುವೆ ಕ್ಷೌರಿಕಗೆ
ಸಾಣೆಗೆ ಹಿಡಿದ ಕತ್ತರಿ ತೆಗೆದು
ಕಿರ ಕಿರ ಕೂದಲ ಕತ್ತರಿಸೆ

ನೀರನು ಚಿಮುಕಿಸಿ ಬಾಚುತ ತಲೆಯ

ಕ್ಷೌರಿಕ ಕ್ಷೌರವ ಮುಗಿಸೆ

ಬೇಗನೆ ಮನೆಯನು ಸೇರುತ

ನಾನು ಸ್ನಾನವ ತೀರಿಸುವೆ .

***

Monday, March 9, 2009

ಸೂರ್ಯನಿಗೆ ನಮಸ್ಕಾರ ....

ಸಹಸ್ರ ರಶ್ಮಿಯನು ಸೂಸುವ
ಜಗದ ಕರ್ಮಕೆ ಸಾಕ್ಷಿಯೇ
ಮೂಡು ದಿಕ್ಕಲಿ ಮೂಡುವಂಥ
ನಿನಗೆ ನಾನು ನಮಿಸುವೆ
ಜಗದ ಜೀವರ ಕಾಯಕದಲಿ
ಬೆಳಕ ನೀಡುತ ಹರಸುವೆ
ಕಮಲಿನೀ ನಾಯಕನೇ ನಿನಗೆ
ನಿತ್ಯ ನಾನು ನಮಿಸುವೆ
ಆತ್ಮ ಶಕ್ತಿ ಪ್ರಚೋದಿಸಿ
ಧೀ ಶಕ್ತಿಯ ವೃದ್ಧಿಸಿ
ನಿರತ ಹರಸುವ ಕಮಲಬಾಂಧವ
ನಿನಗೆ ನಾನು ನಮಿಸುವೆ
ಮೇಲಕೇರುತ ಪ್ರಖರನಾಗುತ
ಸಂಜೆ ಅಸ್ತಕೆ ಸೇರುವೆ
ಶಿರವ ಬಾಗಿಸಿ ಕರವ ಜೋಡಿಸಿ
ನಿನಗೆ ನಾನು ನಮಿಸುವೆ
***

Friday, March 6, 2009

ಬೇಡವೇ ಬೇಡ ....



ಬೇಡವೇ ಬೇಡ
ಊಟವು ಬೇಡ
ಪಾಠವು ಬೇಡ
ನನಗೀಗ ಏನೂ ಬೇಡ


ಸುಮ್ಮನೆ ಆಟವ
ಆಡಲು ಬಿಡಿರಿ
ಹೋಗುವೆ ನಾ
ಗೆಳೆಯನ ಜೊತೆಗೆ ಆಟಕ್ಕೆ


ಟಿವಿ ಬೇಡ
ನೀವು ಕೊಡುವ
ಆಮಿಷ ಬೇಡ
ಹೋಗುವೆ ಈಗ ಆಟಕ್ಕೆ


ನಿಮ್ಮ ತಿಂಡಿ
ನಿಮಗೆ ಇರಲಿ
ನನಗೆ ಬೇಡ
ನಾ ಹೋಗುವುದು ಹೋಗುವುದೇ !

***

Thursday, March 5, 2009

ನನ್ನ ಅಜ್ಜಿ


ಅಜ್ಜಿ ಅಜ್ಜಿ ನನ್ನಜ್ಜಿ
ತಿಂಡಿಯ ಕೊಡುವ ನನ್ನಜ್ಜಿ
ಕಥೆಯನು ಹೇಳುವ ನನ್ನಜ್ಜಿ

ಪದ್ಯವ ಹೇಳುವ ನನ್ನಜ್ಜಿ
ಮದ್ದನು ಮಾಡುವ ನನ್ನಜ್ಜಿ
ಮುದ್ದನು ಮಾಡುವ ನನ್ನಜ್ಜಿ

ಮಲ್ಲಿಗೆ ಕೊಯ್ಯುವ ನನ್ನಜ್ಜಿ
ಮಾಲೆಯ ಮಾಡುವ ನನ್ನಜ್ಜಿ
ಮೆಲ್ಲನೆ ನಡೆಯುವ ನನ್ನಜ್ಜಿ



ಮೊಸರನು ಕಡೆಯುವ ನನ್ನಜ್ಜಿ
ಮಜ್ಜಿಗೆ ಮಾಡುವ ನನ್ನಜ್ಜಿ
ಬೆಣ್ಣೆಯ ಕೊಡುವ ನನ್ನಜ್ಜಿ


ಅಜ್ಜಿ ಅಜ್ಜಿ ನನ್ನಜ್ಜಿ
ಮುದ್ದು ಮುದ್ದು ನನ್ನಜ್ಜಿ
ಎಲ್ಲರ ಮುದ್ದಿನ ನನ್ನಜ್ಜಿ


***

(photo courtesy : SriVidya)