Wednesday, August 26, 2009

ಚಕ್ಕುಲಿ..


ಚಕ್ಕುಲಿ ಚಕ್ಕುಲಿ
ಬಿಸಿ ಬಿಸಿ ಚಕ್ಕುಲಿ


ಅಮ್ಮನು ಮಾಡಿದ
ಗುಂಡನೆ ಚಕ್ಕುಲಿ


ಅಕ್ಕನು ಮಾಡಿದ
ಕಡ್ಡಿಯ ಚಕ್ಕುಲಿ

ಬಾಯಲಿ ಕರಗುವ
ಬೆಣ್ಣೆ ಚಕ್ಕುಲಿ


ಕೆಂಪಗೆ ಕರಿದ
ಗರಿ ಗರಿ ಚಕ್ಕುಲಿ


ಚಕ್ಕುಲಿ ಚಕ್ಕುಲಿ
ಬಿಸಿ ಬಿಸಿ ಚಕ್ಕುಲಿ
***

Tuesday, August 25, 2009

ಗಣಪನ ಹಬ್ಬ...



ಮಣ್ಣಿನ ಗಣಪನ
ವಿಗ್ರಹ ಮಾಡಿ
ಎತ್ತರ ಪೀಠದಿ ಕುಳ್ಳಿರಿಸಿ

ಬಗೆ ಬಗೆಯಲಿ
ಸಿಂಗರಿಸಿದ ಮಂಟಪ
ಅಂದದಿ ಊರಲಿ ಮೆರೆದಿರಲು

ಚಕ್ಕುಲಿ ಕಡುಬು
ಮೋದಕ ಪಾಯಸ
ಬಗೆಬಗೆ ಕಜ್ಜಾಯ ತಿನಿಸುಗಳು

ಕಬ್ಬು ಕಡಲೆ
ಅರಳು ಗರಿಕೆ
ಎಲ್ಲವ ಗಣಪನ ಮುಂದಿಡಲು

ಊರಿನ ಹಿರಿಯರು
ಕಿರಿಯರು ಗೆಳೆಯರು
ಮಾತೆಯರೆಲ್ಲ ಸೇರಿರಲು

ಹಾಡನು ಹಾಡಿ
ಆರತಿ ಬೆಳಗಿ
ಪೂಜೆಯ ಮಾಡಿ ಕೈಮುಗಿದು

ಸರತಿಯ ಸಾಲಲಿ
ಎಲ್ಲರು ನಿಲ್ಲಲು
ಪಂಚಕಜ್ಜಾಯ ವಿತರಿಸಲು

ವಿಧ ವಿಧ ಆಟವ
ಆಡುತ ಜನರು
ಮೋದದಿ ಎಲ್ಲ ಸೇರುತಲಿ

ಗಣಪನ ಹಬ್ಬಕೆ
ಊರಿಗೆ ಊರೇ
ಸಡಗರದಿಂದ ನೆರೆದಿತ್ತು
***

Thursday, August 20, 2009

ಬೆಳವಣಿಗೆ..



ಹನಿ ಹನಿ ಸೇರಿ
ದೊಡ್ಡ ಶರಧಿಯಾಯಿತು



ಕಾಳು ಕಾಳು ಸೇರಿ
ದೊಡ್ಡ ಕಣಜವಾಯಿತು



ದಿನ ದಿನವು ಉಳಿಸೆ
ಹಣದ ಮೊತ್ತವಾಯಿತು



ದೀಪದಿಂದ ದೀಪ ಬೆಳಗಿ
ಬೆಳಕು ಹೆಚ್ಚಿತು



ದಿನಕ್ಕೊಂದು ವಿಷಯ ಕಲಿಯೆ
ಜ್ಞಾನ ಬೆಳೆಯಿತು .

***

Wednesday, August 12, 2009

ಜಾರುಬಂಡಿ

ಶಾಲೆಯ ಬದಿಯಲಿ
ಆಟದ ಬಯಲಲಿ
ಜಾರುಬಂಡಿಯ ಮಾಡಿಹರು


ಸಂಜೆಯ ವೇಳೆಗೆ
ಆಟದ ಸಮಯಕೆ
ಜಾರುವ ಆಟವನಾಡುವೆವು


ಗೆಳೆಯರು ನಾನೂ
ಬಂಡಿಯ ಮೇಲಕೆ
ಹತ್ತುತ ಜಾರುತಲಿರುತಿಹೆವು


ಆಡುತ ಕುಣಿಯುತ
ಪಾಠವ ಓದುತ
ಜಾಣರಾಗಿ ಬಾಳುವೆವು .

***

Tuesday, August 11, 2009

ಹಣ್ಣು ..



ರುಚಿ ರುಚಿ ರುಚಿಯ

ಕಿತ್ತಳೆ ಹಣ್ಣು


ಮರದಲಿ ಬೆಳೆಯುವ

ಮಾವಿನ ಹಣ್ಣು



ಗೊಂಚಲು ಗೊಂಚಲು

ದ್ರಾಕ್ಷಿಯ ಹಣ್ಣು


ಉದ್ದನೆ ಗೊನೆಯ

ಬಾಳೆಯ ಹಣ್ಣು


ಪುಟ್ಟನೆ ಗಿಡದಲಿ
ಪೇರಳೆ ಹಣ್ಣು



ನಾಲಿಗೆ ಹಿತಕೆ

ನೇರಳೆ ಹಣ್ಣು



ಗಟ್ಟಿ ದೇಹಕೆ

ಹಲಸಿನ ಹಣ್ಣು



ದಿನ ದಿನ ಸವಿಯುವ

ಒಳ್ಳೆಯ ಹಣ್ಣು

***


Monday, August 10, 2009

ಜೋಕಾಲಿ ..




ಆಲದ ಮರದ
ಬೀಳಲು ಹಿಡಿದು
ಜೋಕಾಲಿಯಾಡುವ ಬಾರಣ್ಣ



ಸರತಿಯ ಸಾಲಲಿ
ನಿಲ್ಲುತ ನಾವು
ಜೋಕಾಲಿ ಜೀಕುವ ಬಾರಣ್ಣ



ಅಮ್ಮನು ಕೊಟ್ಟಿಹ
ಕಡಲೆ ಮಿಠಾಯಿ
ಹಂಚುತ ತಿನ್ನುವ ಬಾರಣ್ಣ



ಸಂಜೆಯ ಹೊತ್ತು
ಮನೆಯನು ಸೇರುತ
ದೀವಪ ಬೆಳಗುವ ಬಾರಣ್ಣ
***

Sunday, August 9, 2009

ನರಿರಾಯ ...



ಮೇಲಕೆ ನೀನು
ನೋಡುತ ಏನು
ಹೊಂಚನು ಹಾಕುವೆ ನರಿರಾಯ ?



ಬಾನಲಿ ಹಾರುವ
ಹಕ್ಕಿಯ ಹಿಡಿಯುವ
ಯೋಚನೆ ನಿನ್ನದೆ ನರಿರಾಯ ?



ದ್ರಾಕ್ಷಿಯ ತೋಟದಿ
ಬಿಟ್ಟಿಹ ಹಣ್ಣನು
ಪಡೆಯಲು ಸೋತೆಯ ನರಿರಾಯ ?



ಹಾರುವ ಹಕ್ಕಿಯ
ಹಿಡಿಯಲು ನಿನಗೆ
ದಾರಿಯು ಹೊಳೆಯಿತೆ ನರಿರಾಯ ?

***

Friday, August 7, 2009

ಬಾವಲಿ



ಹಣ್ಣನು ಹುಡುಕುತ
ಹಾರುತ ಬರುವ
ದೊಡ್ಡ ರೆಕ್ಕೆಯ ಬಾವಲಿಯೇ



ರಾತ್ರಿಯ ಹೊತ್ತಲಿ
ವೇಗದಿ ಹಾರುತ
ಏನು ನಿನಗೆ ಗಲಿಬಿಲಿಯೇ ?



ಹಗಲು ಹೊತ್ತಲಿ
ಮರದಲಿ ಜೋಲುವೆ
ಗುಂಪಿನೊಳೇಕೆ ವಾಸಿಸುವೆ ?



ಬಾ ಬಾ ಬಾವಲಿ
ನಿನ್ನನು ನೋಡಿ
ಚಿತ್ರವ ನಾನು ಬಿಡಿಸುವೆ



ಓಡದೆ ನೀನು
ಇದ್ದರೆ ಒಂದೆಡೆ
ಹಣ್ಣನು ನಾನು ತಿನ್ನಿಸುವೆ !

***