Thursday, October 23, 2008

ಫುಟ್ಬಾಲ್ಅಪ್ಪನು ಕೊಡಿಸಿದ

ದೊಡ್ಡ ಚೆಂಡು

ಕಾಲಲಿ ಒದೆಯುವ

ದೊಡ್ಡ ಚೆಂಡು

ಗೆಳೆಯರ ಕೂಡಿ

ಆಡುವ ಚೆಂಡುಒಂದೇ ಒದೆತಕೆ

ಹಾರುವ ಚೆಂಡು

ಆಗಸದೆತ್ತರ

ಪುಟಿಯುವ ಚೆಂಡುಅಪ್ಪನು ಕೊಡಿಸಿದ
ದೊಡ್ಡ ಚೆಂಡು
ಕಾಲಲಿ ಒದೆಯುವ
ದೊಡ್ಡ ಚೆಂಡು

***

Wednesday, October 22, 2008

ಚೈತ್ರದ ಬರುವಿಗೆ

ಚೈತ್ರದ ಬರುವಿಗೆ
ವಸುಮತಿ ವೈಭವ
ಬಣ್ಣದ ಮೇಳವ ನಡೆಸುತಿದೆ
ಕಾಣುವ ಕಣ್ಣಿಗೆ
ಚೆಲುವಿನ ಸಂಭ್ರಮ
ಮೋಹಕ ಕಾವ್ಯವ ಬರೆಯುತಿದೆ
ಯಾವೆಡೆ ನೋಡಲಿ
ಹೂವಿನ ಬೆಡಗು
ರಂಗಿನ ಚಿತ್ರವ ಬರೆಯುತಿದೆ
ಅನುಪಮ ಕೋಗಿಲೆ
ತಳಿರನು ಸವಿದು
ಇಂಪಿನ ಗಾನವ ಹಾಡುತಿದೆ
ನೀಲಿಯ ಗಗನದಿ
ಬೆಳ್ಳಿಯ ಮುಗಿಲು
ಹಾಲಿನ ಹರವಿಯ ಚೆಲ್ಲುತಿದೆ
ಹುಣ್ಣಿಮೆ ಚಂದಿರ
ಕಂಪನು ಸುರಿದು
ಕವಿತೆಗೆ ಪ್ರೇರಣೆ ತುಂಬುತಿದೆ
***

Tuesday, October 21, 2008

ಅವರೆ ಬಳ್ಳಿಅಮ್ಮನು ಬೆಳೆಸಿದ

ಅವರೆ ಬಳ್ಳಿ

ಅಂಗಳ ತುಂಬಾ

ಹಬ್ಬಿದ ಬಳ್ಳಿ

ಗೊಂಚಲು ಗೊಂಚಲು

ಕಾಯ್ಗಳು ಹುಟ್ಟಿ

ಅಮ್ಮನು ತರುವಳು

ತುಂಬಿಸಿ ಬುಟ್ಟಿ

***

Monday, October 20, 2008

ಗೊಂಬೆಗೊಂಬೆಯ ಕೊಳ್ಳಿರಿ ಗೊ೦ಬೆಯನು

ಅಂದದ ಚೆಂದದ ಗೊ೦ಬೆಯನು

ಚಂದದ ಮರದ ಗೊ೦ಬೆಯನು

ಹೊಳೆಯುವ ಗಾಜಿನ ಗೊ೦ಬೆಯನು

ಬಣ್ಣದ ಮಣ್ಣಿನ ಗೊ೦ಬೆಯನು

ಮೆತ್ತನೆ ಬಟ್ಟೆಯ ಗೊ೦ಬೆಯನು

ಗೊಂಬೆಯ ಕೊಳ್ಳಿರಿ ಗೊ೦ಬೆಯನು
ಅಂದದ ಚೆಂದದ ಗೊ೦ಬೆಯನು

***

Sunday, October 19, 2008

ತಟ್ಟನೆ ಹೇಳಿರಿ ..ಹಕ್ಕಿಯ ತೆರದಲಿ ನಭದಲಿ ಹಾರುವೆ

ರೆಕ್ಕೆಗಳೆನಗಿಲ್ಲ

ಮರಿಗಳ ಹೆರುತಲಿ ಮೊಲೆಯನ್ನುಣಿಸುವೆ

ಕಾಡಿನ ಮೃಗವಲ್ಲ !


ಕರಿ ಕರಿ ಬಣ್ಣದ ಕೊಡೆಯನು ಬಿಡಿಸುತ

ಅಲೆವೆನು ಇರುಳಲ್ಲಿ

ಎನ್ನಬಂಧುಗಳೆಲ್ಲರ ಕೂಡುತ

ನಿದ್ರಿಪೆ ಹಗಲಲ್ಲಿ


ಮೊಗವಿದೆ ಕಿವಿಯಿದೆ ಹಲ್ಲುಗಳೆನಗಿವೆ

ಬಾಲವು ಎನಗಿಲ್ಲ

ಕಾಳುಗಲೆರಡಿದ್ದರು ನಾನೆಲದಲಿ

ನಡೆಯುವ ಪರಿಯಿಲ್ಲ


ವೃಕ್ಷಗಳಲಿ ತಲೆಕೆಳಗಿರಿಸುತ

ತೊಟ್ಟಿಲ ತೂಗುವೆನು

ತೋಟಗಳಲ್ಲಿ ಬೇಟೆಯನಾಡುತ

ಹಣ್ಗಳನುಣ್ಣುವೆನು


ಬಾವಿಯ ಆದಿಲಿ ಭವನದ ನಡುವಲಿ
ಬೇಲಿಯ ಕೊನೆಯಲ್ಲಿ

ಎನ್ನದೆ ಹೆಸರಿದೆ ತಟ್ಟನೆ ಪೇಳಿರಿ

ಮೂರಕ್ಷರಗಳಲಿ !


(ಕವಿ : ಮುಂಡಾಜೆ ರಾಮಚಂದ್ರ ಭಟ್ )


***

Saturday, October 18, 2008

ಕಂಬಳ


ಕಂಬಳ ಕಂಬಳ ಕಂಬಳ
ಓಟದ ಕೋಣದ ಕಂಬಳ
ಕೆಸರು ಗದ್ದೆ ಕಂಬಳ
ಕೊಬ್ಬಿದ ಕೋಣದ ಕಂಬಳ
ಹಗ್ಗದ ಕೋಣದ ಕಂಬಳ
ಬಿಳಿಯ ನಿಶಾನೆಯ ಕಂಬಳ
ಡೋಲಿನ ಡಂ ಡಂ ಕಂಬಳ
ಮಿಠಾಯಿ ತಿಂಡಿ ಕಂಬಳ
ತೂಗುವ ತೊಟ್ಟಿಲ ಕಂಬಳ
ನಾನೂ ಅಪ್ಪನು ನೋಡುವ
ನಮ್ಮ ಊರಿನ ಕಂಬಳ
***

Friday, October 17, 2008

ದಾಸಯ್ಯದಾಸಯ್ಯ ಬಂದ ನಮ್ಮನೆಗೆ

ಜೋಳಿಗೆ ಹಿಡಿದು ಬಾಗಿಲಿಗೆ

ಬಿಳಿಯ ಪಂಚೆ ಉಟ್ಟಿದ್ದ

ಚಂದದ ನಾಮವ ಹಾಕಿದ್ದ

ದೀಪದ ಕಂಬವ ಹಿಡಿದಿದ್ದ

ಎಣ್ಣೆಯ ಬತ್ತಿಯ ಬೇಡಿದ್ದ

ಭಂ ಭಂ ಶಂಖವ ಊದಿದ್ದ

ಡಣ ಡಣ ಜಾಗಟೆ ಬಾರಿಸಿದ

ದಾಸಯ್ಯ ಬಂದ ನಮ್ಮನೆಗೆ
ಜೋಳಿಗೆ ಹಿಡಿದು ಬಾಗಿಲಿಗೆ

***

Thursday, October 16, 2008

ನಿನ್ನನು ವಂದಿಪೆ ..

ನಿನ್ನನು ವಂದಿಪೆ ನಿನ್ನನು ಬೇಡುವೆ

ಎನ್ನನು ಸಲಹೈ ದೇವ
ವಿದ್ಯೆಯ ಕೊಡು ನೀ ಬುದ್ಧಿಯ ಕೊಡು ನೀ

ಸಕಲವ ಕೊಡು ನೀ ದೇವ
ತಾಯಿಯು ನೀನೆ ತಂದೆಯು ನೀನೆ


ಬಂಧುವು ನೀನೆ ದೇವನಿನ್ನ ನೆನಹದು ಎನ್ನೀ ಹೃದಯದಿ

ಸತತವು ನೆಲೆಸಲಿ ದೇವ


ನಿನ್ನನು ವಂದಿಪೆ ನಿನ್ನನು ಬೇಡುವೆ
ಎನ್ನನು ಸಲಹೈ ದೇವ

(kavi : ಪಳ್ಳತ್ತಡ್ಕ ಸುಬ್ರಾಯ ಭಟ್ )


***


Wednesday, October 15, 2008

ತರಕಾರಿ

ತರಕಾರಿ ತರಕಾರಿ
ಅಮ್ಮನು ತಂದ ತರಕಾರಿ
ದಪ್ಪನೆ ಇರುವ ಕುಂಬಳ ಕಾಯಿ
ಉದ್ದನೆ ಇರುವ ಪಡುವಲ ಕಾಯಿ
ಸಣ್ಣಗೆ ಇರುವ ಬೆಂಡೆಕಾಯಿ
ನುಣ್ಣಗೆ ಇರುವ ತೊಂಡೆ ಕಾಯಿ
ಅಮ್ಮನು ತಂದ ತರಕಾರಿ
ನಾನು ತಿನ್ನುವ ತರಕಾರಿ
***

Tuesday, October 14, 2008

ಕರುನಮ್ಮ ಕರು ಪುಟ್ಟ ಕರು

ನಮ್ಮ ಹಸುವಿನ ಪುಟ್ಟ ಕರು


ಚೆಂಗು ಚೆಂಗನೆ ನೆಗೆಯುವ ಕರು

ಅಮ್ಮನ ಬಿಟ್ಟು ಓಡದ ಕರು


ಕಂಡು ಬಣ್ಣದ ನಮ್ಮ ಕರು

ನಮ್ಮ ಹಸುವಿನ ಮುದ್ದು ಕರು

***

Monday, October 13, 2008

ಪಾರಿವಾಳ

ಶಾಲೆಗೊಂದು ಪಾರಿವಾಳ
ಹಾರಿ ಬಂದಿತು
ಅದನು ಕಂಡು ಪುಟ್ಟ ಪಾಪ
ಕೈಯ ತಟ್ಟಿತು
ಸದ್ದು ಕೇಳಿ ಪಾರಿವಾಳ
ಹಾರಿ ಹೋಯಿತು
ಪುಟ್ಟ ಪಾಪ ಅದನು ಕಂಡು
ನಿಂತೇ ಬಿಟ್ಟಿತು
***

Tuesday, October 7, 2008

ರೈತ

ನೇಗಿಲ ಹೊತ್ತು
ಹೊಲವನ್ನು ಬಿತ್ತು
ದಿನ ದಿನ ದುಡಿದನು ಸೋಮಣ್ಣ
ಬೀಜವ ಬಿತ್ತಿ
ಜೋಳವ ಬೆಳೆಸಿ
ರಾಶಿಯ ಮಾಡಿದ ಸೋಮಣ್ಣ
ಅಕ್ಕಿಯ ಬೆಳೆದು
ಅನ್ನವ ನೀಡಿ
ಎಲ್ಲರ ಪೊರೆಯುವ ಸೋಮಣ್ಣ
ಕಾಯಕದಲ್ಲಿ ಕೈಲಾಸ
ಕಂಡು ಸುಖ ಸಂತೋಷವ
ಹಂಚುವ ನಮ್ಮ ಸೋಮಣ್ಣ
***

Monday, October 6, 2008

ನವಿಲೇನವಿಲೇ ನವಿಲೇ

ಬಾ ಬಾ ಬಾ

ಬಣ್ಣದ ನವಿಲೇ

ಬಾ ಬಾ ಬಾ


ನಿನ್ನ ಗರಿಯ

ಬಣ್ಣ ಚೆಂದ

ತಲೆಯ ಜುಟ್ಟು

ಬಹಳ ಅಂದನವಿಲೇ ನವಿಲೇ
ಬಾ ಬಾ ಬಾ
ಬಣ್ಣದ ನವಿಲೇ
ಬಾ ಬಾ ಬಾ


***Sunday, October 5, 2008

ಹಗ್ಗ

ನೀರೆಳೆಯಲು ಬೇಕು ನಾರಿನ ಹಗ್ಗ
ಬಟ್ಟೆಯ ಒಣಗಿಸೆ ನೂಲಿನ ಹಗ್ಗ
ಹಸುವನು ಹಿಡಿಯಲು ಉದ್ದನೆ ಹಗ್ಗ
ಕಂತೆಯ ಕಟ್ಟಲು ಸಣ್ಣನೆ ಹಗ್ಗ
ಆಟವ ಆಡಲು ಬಣ್ಣದ ಹಗ್ಗ
ಆಡುತ ಓಡಲು ಆಟದ ಹಗ್ಗ
***

Saturday, October 4, 2008

ನೀರು
ಅಣ್ಣನು ಕುಡಿವನು


ತಣ್ಣನೆ ನೀರು


ಅಜ್ಜನು ಕುಡಿವನು


ಬಿಸಿ ಬಿಸಿ ನೀರುಅಜ್ಜಿಯು ಕುಡಿವಳು


ಮಜ್ಜಿಗೆ ನೀರು


ನನಗೂ ಅಪ್ಪಗೂ


ಸಿಹಿ ಎಳನೀರು !


***


Friday, October 3, 2008

ಆಮೆಆಮೆ ನೋಡಿರಿ ಆಮೆ

ಚಿಪ್ಪಿನ ಚೆಂದದ ಆಮೆ

ಗಟ್ಟಿ ಚಿಪ್ಪಿನ ಆಮೆ

ಮೆಲ್ಲನೆ ನಡೆಯುವ ಆಮೆ

ನೀರಲಿ ಈಜುವ ಆಮೆ

ನೆಲದಲಿ ನಡೆಯುವ ಆಮೆ

ಆಮೆ ನೋಡಿರಿ ಆಮೆ

***

Wednesday, October 1, 2008

ಆನೆಆನೆ ಬಂತು ಆನೆ

ದಪ್ಪ ಗಾತ್ರದ ಆನೆ


ದೊಡ್ಡ ಕಿವಿಯ ಆನೆ

ಸಣ್ಣ ಕಣ್ಣಿನ ಆನೆ


ಉದ್ದ ಸೊಂಡಿಲ ಆನೆ

ತುಂಡು ಬಾಲದ ಆನೆ


ಆನೆ ಆನೆ ಆನೆ

ದಪ್ಪ ಗಾತ್ರದ ಆನೆ

***