Friday, March 20, 2009

ಯಾಕೆ ಹೀಗೆ ....?



ಏನೋ ವಾಸನೆ ಬರುತಿದೆಯಲ್ಲ
ಪರಿಸರ ಮಲಿನ ಮಾಡಿದಿರಲ್ಲ ?
ಬದುಕುವುದೆಂತು ನಾವು ಮುಂದೆ ?


ಕುಡಿಯುವ ನೀರು ಸೇವಿಪ ವಾಯು
ಎಲ್ಲವೂ ಕಲುಷಿತವಾಗಿದೆಯಲ್ಲ ?
ನಿಮ್ಮ ಆಸೆಗೆ ನಮಗೇತಕೆ ಶಿಕ್ಷೆ ?


ನಿಮ್ಮಂತೆಯೇ ನಾವೂ ಅಲ್ಲವೇ ?
ಕಾಡು ಕಡಿದು ನಾಡು ಮಾಡಿ
ಎಲ್ಲವ ಕಶ್ಮಲ ಮಾಡಿದಿರಲ್ಲ ?


ಏನನು ಸಾಧಿಸ ಹೊರಟಿರಿ ನೀವು ?
ನಾಳೆಗೆ ಬದುಕುವ ಚಿಂತೆಯಿಲ್ಲವೇನು ?
ಎಲ್ಲ ವಿಷಮಯ ಮಾಡುವಿರಲ್ಲ ?

ಏನೋ ವಾಸನೆ ಬರುತಿದೆಯಲ್ಲ
ಪರಿಸರ ಮಲಿನ ಮಾಡಿದಿರಲ್ಲ ?
ಬದುಕುವುದೆಂತು ನಾವು ಮುಂದೆ ?
***

Tuesday, March 17, 2009

ಗೆಳೆಯನಿಗೆ ವಿದಾಯ ....



ನಡೆವೆ ನೀನು ಎನ್ನ ಬಿಟ್ಟು
ನಿನ್ನ ಬಾಳ ಗುರಿಯನು
ಸೇರಲೆಂದು ಜಗದ ಬಳಿಗೆ
ಎನ್ನ ಜೀವದ ಗೆಳೆಯನೆ

ಕಳೆದೆವೆ೦ತೊ ಹಲವು ದಿವಸ
ಕೂಡಿ ನಾವು ಹಿತದಲಿ
ಸರಸ ವಿರಸ ಕೊನೆಗೆ ಹರುಷ
ಕೂಡಿ ನಾವು ಹಂಚುತ

ಬಲಿತ ಹಕ್ಕಿ ಕಾಳು ಹೆಕ್ಕಿ
ತಿನ್ನಲೆಂದು ಹಾರುತ
ಮೇಲೆ ನೆಗೆವ ತೆರದಿ ನಾವು
ಜತೆಯ ಬಿಟ್ಟು ಅಗಲುತ
ಇರಲಿ ಪ್ರೀತಿ ಸ್ನೇಹವೆಂದು
ನಿರತ ನಮ್ಮಲೆನ್ನುತ
ಮರಳಿ ನಡೆವ ನಮ್ಮ ನೆಲೆಗೆ
ಸವಿಯ ನೆನಪ ಉಳಿಸುತ

***

Monday, March 16, 2009

ಲಾಟೀನು....


ನೀರವ ಕತ್ತಲೆ ಸಮಯದಲಿ
ಮಂದ ಪ್ರಕಾಶವ ಬೀರುತಲಿ
ನೀಡುವೆ ಬೆಳಕನು ನಮಗಾಗಿ


ಕಪ್ಪನೆ ಬುರುಡೆಗೆ ಎಣ್ಣೆಯ
ತುಂಬಿಸಿ ಬತ್ತಿಯೇರಿಸಿ ಹೊತ್ತಿಸುವೆ
ಮೆತ್ತಗೆ ನೀನು ಪ್ರಕಾಶಿಸುವೆ


ಇರುಳಿನ ದಾರಿಗೆ ದೀಪವಾಗುತ
ಕಳೆಯುವೆ ಕತ್ತಲೆ ನಮಗಾಗಿ
ಮೆಲ್ಲನೆ ಹೊಗೆಯ ಹೊರಸೂಸಿ


ಕಿರುನಗೆ ಸೂಸುತ ಬೆಳಗುತಲಿರುವೆ
ನಮ್ಮಯ ಬಾಳಿನ ಬೆಳಕಾಗಿ
ನಿಶೆಗೆ ನೀನು ರಿಪುವಾಗಿ

****

Wednesday, March 11, 2009

ಕ್ಷೌರ

ಭಾನುವಾರ ರಜೆಯು ಬರಲು
ಹೋಗುವೆ ಕ್ಷೌರಿಕನಂಗಡಿಗೆ
ಬೆಳೆದ ಕೂದಲ ತೆಗೆಸಲು
ನಾನು ಸಾಗುವೆ ಕ್ಷೌರಿಕನಂಗಡಿಗೆ

ತಿರುಗುವ ಕುರ್ಚಿಯ ಮೇಲೆ
ಕುಳಿತು ತಲೆಯನೊಪ್ಪಿಸುವೆ ಕ್ಷೌರಿಕಗೆ
ಸಾಣೆಗೆ ಹಿಡಿದ ಕತ್ತರಿ ತೆಗೆದು
ಕಿರ ಕಿರ ಕೂದಲ ಕತ್ತರಿಸೆ

ನೀರನು ಚಿಮುಕಿಸಿ ಬಾಚುತ ತಲೆಯ

ಕ್ಷೌರಿಕ ಕ್ಷೌರವ ಮುಗಿಸೆ

ಬೇಗನೆ ಮನೆಯನು ಸೇರುತ

ನಾನು ಸ್ನಾನವ ತೀರಿಸುವೆ .

***

Monday, March 9, 2009

ಸೂರ್ಯನಿಗೆ ನಮಸ್ಕಾರ ....

ಸಹಸ್ರ ರಶ್ಮಿಯನು ಸೂಸುವ
ಜಗದ ಕರ್ಮಕೆ ಸಾಕ್ಷಿಯೇ
ಮೂಡು ದಿಕ್ಕಲಿ ಮೂಡುವಂಥ
ನಿನಗೆ ನಾನು ನಮಿಸುವೆ
ಜಗದ ಜೀವರ ಕಾಯಕದಲಿ
ಬೆಳಕ ನೀಡುತ ಹರಸುವೆ
ಕಮಲಿನೀ ನಾಯಕನೇ ನಿನಗೆ
ನಿತ್ಯ ನಾನು ನಮಿಸುವೆ
ಆತ್ಮ ಶಕ್ತಿ ಪ್ರಚೋದಿಸಿ
ಧೀ ಶಕ್ತಿಯ ವೃದ್ಧಿಸಿ
ನಿರತ ಹರಸುವ ಕಮಲಬಾಂಧವ
ನಿನಗೆ ನಾನು ನಮಿಸುವೆ
ಮೇಲಕೇರುತ ಪ್ರಖರನಾಗುತ
ಸಂಜೆ ಅಸ್ತಕೆ ಸೇರುವೆ
ಶಿರವ ಬಾಗಿಸಿ ಕರವ ಜೋಡಿಸಿ
ನಿನಗೆ ನಾನು ನಮಿಸುವೆ
***

Friday, March 6, 2009

ಬೇಡವೇ ಬೇಡ ....



ಬೇಡವೇ ಬೇಡ
ಊಟವು ಬೇಡ
ಪಾಠವು ಬೇಡ
ನನಗೀಗ ಏನೂ ಬೇಡ


ಸುಮ್ಮನೆ ಆಟವ
ಆಡಲು ಬಿಡಿರಿ
ಹೋಗುವೆ ನಾ
ಗೆಳೆಯನ ಜೊತೆಗೆ ಆಟಕ್ಕೆ


ಟಿವಿ ಬೇಡ
ನೀವು ಕೊಡುವ
ಆಮಿಷ ಬೇಡ
ಹೋಗುವೆ ಈಗ ಆಟಕ್ಕೆ


ನಿಮ್ಮ ತಿಂಡಿ
ನಿಮಗೆ ಇರಲಿ
ನನಗೆ ಬೇಡ
ನಾ ಹೋಗುವುದು ಹೋಗುವುದೇ !

***

Thursday, March 5, 2009

ನನ್ನ ಅಜ್ಜಿ


ಅಜ್ಜಿ ಅಜ್ಜಿ ನನ್ನಜ್ಜಿ
ತಿಂಡಿಯ ಕೊಡುವ ನನ್ನಜ್ಜಿ
ಕಥೆಯನು ಹೇಳುವ ನನ್ನಜ್ಜಿ

ಪದ್ಯವ ಹೇಳುವ ನನ್ನಜ್ಜಿ
ಮದ್ದನು ಮಾಡುವ ನನ್ನಜ್ಜಿ
ಮುದ್ದನು ಮಾಡುವ ನನ್ನಜ್ಜಿ

ಮಲ್ಲಿಗೆ ಕೊಯ್ಯುವ ನನ್ನಜ್ಜಿ
ಮಾಲೆಯ ಮಾಡುವ ನನ್ನಜ್ಜಿ
ಮೆಲ್ಲನೆ ನಡೆಯುವ ನನ್ನಜ್ಜಿ



ಮೊಸರನು ಕಡೆಯುವ ನನ್ನಜ್ಜಿ
ಮಜ್ಜಿಗೆ ಮಾಡುವ ನನ್ನಜ್ಜಿ
ಬೆಣ್ಣೆಯ ಕೊಡುವ ನನ್ನಜ್ಜಿ


ಅಜ್ಜಿ ಅಜ್ಜಿ ನನ್ನಜ್ಜಿ
ಮುದ್ದು ಮುದ್ದು ನನ್ನಜ್ಜಿ
ಎಲ್ಲರ ಮುದ್ದಿನ ನನ್ನಜ್ಜಿ


***

(photo courtesy : SriVidya)

Tuesday, March 3, 2009

ನನ್ನ ಬಯಕೆ



ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯೊ೦ದರಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳ ಇಂಚರವು
ಕಲೆಯುತಲೆಯಲೆಯಾಗಿ ಕೇಳಿ ಬರುತಿರಲೆನಗೆ


ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
ದನಿಯು ದನ ಕಾಯುವನ ಕೊಳಲೊಡನೆ ಬರಲಿ
ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು
ದಿನ ದಿನವು ಸವಿಯೂಟವಿಕ್ಕುತಿರಲೆನಗೆ


ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ
ಬೈಗಾಗೆ ನಮ್ಮೊಡನೆ ಗಪಿಯಲೆದಡ್ಡಾಡೆ
ಗೋಪಾಲಕನಾಗಿರುವ ತಿಮ್ಮನೆನಗಿರಲಿ


ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ
ನನ್ನಾಸೆಯೇನೆಂದು ಎಲ್ಲರರಿತಿರಲಿ
ಸಗ್ಗವಿವನೊಳಗೊ೦ಡಿರಲು ಸಗ್ಗವೆನಗಿರಲಿ
ನರಕವಿವನೊಳಗೊ೦ಡಿರಲು ನರಕವೆನಗಿರಲಿ

(ಕವಿ : ಕುವೆಂಪು )
***

Monday, March 2, 2009

ಎಲ್ಲಿ ಮನಕಳುಕಿರದೋ.....

ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು
ಧೂಳೊಡೆಯದಿಹುದೋ ತಾನಾನಾಡಿನಲ್ಲಿ

ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು
ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ
ಎಲ್ಲಿ ದಣಿವಿರದೆ ಸಾಧನೆಯ ಸಫಲತೆ ಕಡೆಗೆ
ತೋಳ ನೀಡಿಹುದೋ ತಾನಾನಾಡಿನಲ್ಲಿ :ಎಲ್ಲಿ :
ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು
ಹಾಳು ರೂಢಿಯ ಮರಳೊಳಿಂಗಿ ಕೆಡದಲ್ಲಿ
ಎಲ್ಲಿ ನೀನೆಮ್ಮ ಚಿಂತನವನೂದ್ಯಮಿಸುವೆ
ವಿಶಾಲತೆಯ ಪೂರ್ಣತೆಗೆ ಮುಂಬರಿಸುವಲ್ಲಿ
ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ
ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ :ಎಲ್ಲಿ :
(ಕವಿ :ರವೀಂದ್ರ ನಾಥ ಠಾಗೋರ್ )
***