Thursday, August 22, 2013

ನಮ್ಮ ಪುಟ್ಟ

ಪುಟ್ಟನೊಂದು  ಬಾಳೆಹಣ್ಣು  ಸುಲಿದು ತಿಂದನು 
ಸುಲಿದು ತಿಂದು ಸಿಪ್ಪೆಯನ್ನು ನೆಲಕೆ ಒಗೆದನು 
ಪುಟ್ಟನೊಡನೆ ಮಾತನಾಡೆ  ನಾಣಿ ಬಂದನು 
ಓಡಿ  ಬಂದು ಸಿಪ್ಪೆ ತುಳಿಯೆ  ಜಾರಿ ಬಿದ್ದನು 
ಹಿಡಿದು ಪುಟ್ಟನವನ ಜುಟ್ಟು ಏಟು ಕೊಟ್ಟನು 
ತಪ್ಪನರಿತ ಪುಟ್ಟ ಸಿಪ್ಪೆಯನ್ನು  ತಿಪ್ಪೆಗೆಸೆದನು 
ಜಾಣ ಬಾಲನಂತೆ  ತನ್ನ ಮನೆಗೆ ನಡೆದನು 
                                                                                                     -ಮಂಜೇಶ್ವರ ಗೋವಿಂದ ಪೈ 

Tuesday, February 19, 2013

ರೈತ ಗೀತೆ

ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ.

ಲೋಕದೊಳೇನೇ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ:
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೆ ಇಲ್ಲ.

ಬಾಳಿತು ನಮ್ಮೀ ನಾಗರಿಕತೆ ಸಿರಿ
ಮಣ್ಣುಣಿ ನೇಗಿ
ಲಿನಾಶ್ರಯದಿ;
ನೇಗಿಲ ಹಿಡಿದಾ ಕೈಯಾಧಾರದಿ
ದೊರೆಗಳು ದರ್ಪದೊಳಾಳಿದರು.
ನೇಗಿಲ ಬಲದೊಳು ವೀರರು ಮೆರೆದರು,
ಶಿಲ್ಪಿಗಳೆಸೆದರು, ಕವಿಗಳು ಬರೆದರು.

ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ  ಅನ್ನವನೀಯುವನು.
ಹೆಸರು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ.
ನೇಗಿಲಕು
ದೊಳಗಡಗಿದೆ ಕರ್ಮ;
ನೇಗಿಲ ಬಲವೇ ನಮ್ಮಯ ಧರ್ಮ