Saturday, November 29, 2008

ಟೊಪ್ಪಿ ದಾಸಪ್ಪ

ಟೊಪ್ಪಿಯ ಮಾರುವ ಕೆಲಸವ ಮಾಡಿ
ಹೊಟ್ಟೆಯ ಹೊರೆವನು ದಾಸಪ್ಪ
ಟೊಪ್ಪಿಯ ಮಾರಲು ಪಕ್ಕದ
ಊರಿಗೆ ಸಾಗುತಲಿರಲು ದಾಸಪ್ಪ
ಬಿಸಿಲಿನ ಬೇಗೆಗೆ ಹಸಿವಿನ ತಾಪಕೆ
ಮಾಮರದಡಿಯಲಿ ಕುಳಿತಿರಲು
ಬುತ್ತಿಯ ಬಿಚ್ಚಿ ರೊಟ್ಟಿಯ ತೆಗೆದು
ಹಸಿವನು ನೀಗಿದ ದಾಸಪ್ಪ
ಮಾಮರದಲ್ಲಿ ಮಂಗಗಳೆಲ್ಲ
ಟಿರಿ ಟಿರಿಗುಟ್ಟುತ ಕುಳಿತಿರಲು
ಟೊಪ್ಪಿಯ ದಾಸಪ್ಪನ ಕಂಡು
ಹಲ್ಲನು ಗಿಂಜಿ ಕಿರಿಗುಡಲು
ಊಟದ ಬಳಿಕ ನಿದ್ದೆಯ ಮಾಡಿದ
ಮರದ ಬುಡದಲಿ ದಾಸಪ್ಪ
ಮರವನ್ನು ಇಳಿದು ಮಂಗಗಳೆಲ್ಲ
ಟೋಪಿಯ ಬುಟ್ಟಿಗೆ ಕೈಯಿಟ್ಟು
ಸಿಕ್ಕಿದ ಟೋಪಿಯ ತಲೆಯಲಿ ಇಟ್ಟು
ಮರದಲಿ ಕುಳಿತು ಕೀಯೆನಲು
ಎಚ್ಚರಗೊಂಡು ದಾಸಪ್ಪನು
ಬುಟ್ಟಿಯ ಒಳಗೆ ಕೈಯಿಡಲು
ಟೊಪ್ಪಿಯು ಕಾಣದೆ ಕಂಗಾಲು
ಮರದ ಮೇಲೆ ಕಪಿಗಳ ತಲೆಯಲಿ
ಟೊಪ್ಪಿಗಳೆಲ್ಲ ರಂಜಿಸಲು
ಪಕ್ಕನೆ ಉಪಾಯ ಹೊಳೆದು ದಾಸನು
ತನ್ನ ಟೊಪ್ಪಿಯ ತೆಗೆದೆಸೆಯೆ
ಕಪಿಗಳೆಲ್ಲ ಅದನೋಡುತ
ಎಸೆದವು ಟೋಪಿಯ ಸಿಕ್ಕೆಡೆಗೆ
ಎಲ್ಲ ಟೊಪ್ಪಿಯ ಕೂಡಲೇ ದಾಸನು
ಬುಟ್ಟಿಯ ಒಳಗೆ ತುಂಬಿಸುತ
ಕೂಡಲೇ ನಡೆದನು ವ್ಯಾಪಾರಕ್ಕೆನ್ನುತ
ಪಕ್ಕದ ಊರಿಗೆ ತಾ ನಗುತ !
(ಕವಿ : ಸುಬ್ರಹ್ಮಣ್ಯ ಭಟ್ )
***

Friday, November 28, 2008

ದೇಶ ಭಕ್ತಿಗೀತೆ

ವಿಶಾಲ ಭಾರತ
ಭವ್ಯ ದಿವ್ಯ ಭಾರತ
ಸಂಸ್ಕೃತಿಯ ನೆಲೆಯು ಭಾರತ


ಪ್ರಕೃತಿ ಸೌ೦ದರ್ಯದಿ
ಜಗದಿ ದಿವದಿ ಮೆರೆಯುವ
ಪುಣ್ಯ ಭೂಮಿ ನಮ್ಮ ಭಾರತ


ಎದ್ದೇಳಿ ವೀರ ಪ್ರಜೆಗಳೇ
ಶಾಂತಿಗಾಗಿ ಮುನ್ನಡೆಯಿರಿ
ಭ್ರಾತೃತ್ವವವನ್ನು ಬೆಳೆಸಿರಿ
ಒಂದಾಗಿ ಕೂಡಿ ಬಾಳಿರಿ


ವಿಶಾಲ ಭಾರತ

ಭವ್ಯ ದಿವ್ಯ ಭಾರತ

ಸಂಸ್ಕೃತಿಯ ನೆಲೆಯು ಭಾರತ

***

Thursday, November 27, 2008

ನಮ್ಮ ಕನ್ನಡ ನಾಡು

ನಮ್ಮ ನಾಡಿದು ನಮ್ಮದು
ನಮ್ಮ ಕನ್ನಡ ನಾಡಿದು
ನೆಮ್ಮದಿಯ ತವರೂರಿದು
ಕಂಗು ಬೆಳೆಯುವ ನಾಡಿದು
ತೆಂಗು ಬೆಳೆಯುವ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು
ಅರಳು ಮಲ್ಲಿಗೆ ನಾಡಿದು
ಕೆಂಡ ಸಂಪಿಗೆ ನಾಡಿದು
ಕೋಗಿಲೆಯ ತವರೂರಿದು
ಭಾರಿ ಸೊಬಗಿನ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು
ಬತ್ತ ಬೆಳೆಯುವ ನಾಡಿದು
ಮುತ್ತು ಬೆಳೆಯುವ ನಾಡಿದು
ಹೊನ್ನು ಬೆಳೆಯುವ ನಾಡಿದು
ಅನ್ನ ನೀಡುವ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು
ಹಲವು ಕವಿಗಳ ಬೀಡಿದು
ವೀರ ಶೂರರ ನಾಡಿದು
ನಾವು ಹುಟ್ಟಿದ ನಾಡಿದು
ತಾಯಿ ಹುಟ್ಟಿದ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು
(ಕವಿ : ಮ.ಸಂ. ರಾವ್ )
***

Wednesday, November 26, 2008

ಕಿಟ್ಟಪ್ಪ

ರೊಟ್ಟಿ ಅಂಗಡಿ ಕಿಟ್ಟಪ್ಪ
ನನಗೊಂದು ರೊಟ್ಟಿ ತಟ್ಟಪ್ಪ

ಪುಟಾಣಿ ರೊಟ್ಟಿ ಚೆ೦ದಕೆತಟ್ಟಿ
ಅಂಗೈಲಿಟ್ಟು ತಾರಪ್ಪ

ರೊಟ್ಟಿ ಅಂಗಡಿ ಕಿಟ್ಟಪ್ಪ
ನನಗೊಂದು ರೊಟ್ಟಿ ತಟ್ಟಪ್ಪ
***

Tuesday, November 25, 2008

ಕಂದನ ನಗು

ತಣ್ಣನೆ ರಾತ್ರಿಯ ಆಕಾಶದಲಿ
ಚಂದಿರ ನಗುತಿದ್ದ
ಅಮ್ಮನ ಕೂಡೆ ಅಂಗಳದಲ್ಲಿ
ಕಂದನು ಕುಳಿತಿದ್ದ


ಮಲ್ಲಿಗೆ ಹೂವಿನ ಪರಿಮಳ ಮೆಲ್ಲನೆ
ತೇಲುತ ಬರುತಿರಲು
ಮಿಂಚುಹುಳವು ಮಿರಿ ಮಿರಿಗುಟ್ಟುತ
ಬಳ್ಳಿಯ ಬಳಿಯಿರಲು


ಹಚ್ಚಿದ ಹಣತೆಯ ಹಿಡಿಯುತ
ಬಂದಳು ಅಕ್ಕನು ತಾನಾಗಿ
ಪಕ್ಕನೆ ಎಣ್ಣೆಯ ಕುಡಿಕೆಯ
ಮರೆಯಲು ಅಪ್ಪನು ಒಳ ಹೋಗಿ


ದೀಪವನಿರಿಸಲು ತುಳಸಿಯ
ಬುಡದಲಿ ಕೈಜೋಡಿಸಿ ನಿಂತು
ದೇವರ ನೆನೆಯುವ ಪರಿಯನು ಕಂಡು
ಕಂದಗೆ ನಗು ಬಂತು .

(ಕವಿ : ಸುಬ್ರಹ್ಮಣ್ಯ ಭಟ್)

***

Monday, November 24, 2008

ಬಣ್ಣದ ವೇಷಬಣ್ಣದ ಮನೆಗೆ ಅಣ್ಣನ ಕೂಡೆ
ಪುಟ್ಟಣ್ಣನು ಹೋಗಿದ್ದ
ಬಣ್ಣದ ವೇಷವ ಬರೆವುದ ಕಂಡು
ಕಣ್ ಕಣ್ ಬಿಟ್ಟಿದ್ದ
ರಂಗದ ಮೇಲೆ ಭಾಗವತನು
ಹಾಡನು ಹಾಡಿದ್ದ
ಬದಿಯಲಿ ನಿಂತು ಶಂಕರಣ್ಣನು
ಚೆಂಡೆಯ ಬಡಿದಿದ್ದ
ದೂತನು ಬಂದು ನಾಥನ ಮುಂದೆ
ಲಾಗ ಹಾಕಿದ್ದ
ನಾಥನು ಹೋಗಿ ರಕ್ಕಸರೊಂದಿಗೆ
ಸಮರವ ನಡೆಸಿದ್ದ
ಸೋತ ನಾಥನು ಹರಿಯ ಮುಂದೆ
ಕೈ ಜೋಡಿಸಿ ನಿಂತಿದ್ದ
ಅಭಯವನಿತ್ತ ಹರಿ ಬೇಗನೆ ಬಂದು
ಚಕ್ರವ ಬಿಟ್ಟಿದ್ದ
ಭೀತಿಯಿ೦ದ ಓಡಿದ ರಕ್ಕಸ
ಬಣ್ಣದ ಮನೇಲಿದ್ದ
ಮೆಲ್ಲನೆ ವೇಷವ ಕಳಚುತ
ನೋಡಿರೆ ಮಾಲಿಂಗಜ್ಜನಾಗಿದ್ದ !!
(ಕವಿ : ಸುಬ್ರಹ್ಮಣ್ಯ ಭಟ್ )
***

Sunday, November 23, 2008

ರಾಷ್ಟ್ರಧ್ವಜ

ಬಾರಣ್ಣ ನೋಡಣ್ಣ

ಓ ಮುದ್ದು ಚಿಣ್ಣ

ಬಾನಿನಲಿ ಹಾರುತಿದೆ ರಾಷ್ಟ್ರಧ್ವಜವಣ್ಣ

ಮೇಲೆ ಕೇಸರಿ ಬಣ್ಣ

ನಡು ಬಿಳುಪಣ್ಣ

ಕೆಳಗೆ ಹಸಿರು ಬಣ್ಣ

ನಡುವೆ ಚಕ್ರವಣ್ಣ

ಬಾರಣ್ಣ ನೋಡಣ್ಣ
ಓ ಮುದ್ದು ಚಿಣ್ಣ
ಬಾನಿನಲಿ ಹಾರುತಿದೆ ರಾಷ್ಟ್ರಧ್ವಜವಣ್ಣ

Friday, November 21, 2008

ಪುರಿ ಮಾರುವವನು

ಪುರಿಗಳ ಅಂಗಡಿ ನಾಗಣ್ಣ

ಕೊಡು ನಾಕಾರು ಪುರಿಯನ್ನ

ಬುರುಬುರು ಉಬ್ಬಿದ

ಕೆಂಪಗೆ ಕಾಯ್ದಿಹ

ಕಟ್ಟೋ ನನಗೆ ಪುರಿಯನ್ನ

ರುಚಿ ರುಚಿ ಪುರಿ

ಬಿಸಿ ಬಿಸಿ ಪುರಿ

ಬೇಗನೆ ಕೊಡೋ ನಾಗಣ್ಣ !

***

Thursday, November 20, 2008

ಕೃಷ್ಣ

ಪುಟಾಣಿ ಕೃಷ್ಣ
ಪುಟ್ಟ ಪುಟ್ಟ ಅಂಗೈ
ಭಲಾರೆ ಗಡಿಗೆ
ದೊಡ್ಡ ಬೆಣ್ಣೆ ಮುದ್ದೆ
ತೆಗೆದ ಮುಕ್ಕಿದ
ತೆಗೆದ ನೆಕ್ಕಿದ
ಕೈಯೆಲ್ಲ ಬೆಣ್ಣೆ
ಮುಖವೆಲ್ಲ ಬೆಣ್ಣೆ
ತುಂಟ ಕೃಷ್ಣ
ತುಂಟ ಕೃಷ್ಣ
(ಕವಿ : ಜೆ. ಪಿ. ರಾಜರತ್ನಂ )
***

Wednesday, November 19, 2008

ಹಣ್ಣು ಮಾರುವವನು

ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತಳೆ
ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು
ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ
ಬೆಳಗಾವಿಯ ಸವಿ ಸಪೋಟ
ದೇವನ ಹಳ್ಳಿಯ ಚಕ್ಕೋತ
ಗಂಜಾಂ ಅಂಜೀರ್ ತುಮಕೂರ್ ಹಲಸು
ಧಾರವಾಡದ ಆಪೂಸು
ಮಲೆನಾಡಿನ ಅನನಾಸು
ಕೊಳ್ಳಿರಿ ಮರೆತು ಸಿಹಿ ತಿನಿಸು
ನಾಲಿಗೆ ಬರವನು ಕಳೆಯುವವು
ದೇಹದ ಬಲವನ್ನು ಬೆಳೆಸುವವು
ಕೊಳ್ಳಿರಿ ಬಗೆ ಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ
***

Tuesday, November 18, 2008

ನರಿಯ ನಿರಾಸೆ ...

ನರಿಯು ತೋಟಕೆ ಹೋಯಿತು
ನೋಡಿತೇನದು ?
ಚಪ್ಪರದಿಂದ ಹೂಡಿದಾ
ದ್ರಾಕ್ಷಿ ಗೊಂಚಲು
ಒಂದು ಸಲ ಹಾರಿತು
ಎರಡು ಸಲ ಹಾರಿತು
ಮೂರು ಸಲ ಹಾರಿತು
ಸೋತು ಹೋಯಿತು !
ದ್ರಾಕ್ಷಿ ಹುಳಿ ಎಂದಿತು
ಓಡಿ ಹೋಯಿತು !!
***

Monday, November 17, 2008

ಹಕ್ಕಿ ಸಂಸಾರ ...

ಹಕ್ಕಿಯೊಂದು ಹಾರಿ ಬಂದು
ಗೂಡು ಕಟ್ಟಿತು
ಮೊಟ್ಟೆ ಇಟ್ಟು ಕಾವು ಕೊಟ್ಟು
ಮರಿಯ ಮಾಡಿತು
ಹಕ್ಕಿ ಮರಿಗಳೆಲ್ಲ ದಿನವು
ಚಿಂವ್ ಚಿಂವ್ ಅಂದಿತು
ಅಮ್ಮ ಹಕ್ಕಿ ಕಾಳು ಹೆಕ್ಕಿ
ಗುಟುಕು ಕೊಟ್ಟಿತು
ಹಕ್ಕಿ ಮರಿಗಳೆಲ್ಲ ಬಲಿತು
ಹಾರತೊಡಗಿತು
ತಾಯಿ ಹಕ್ಕಿ ಇದನು ಕಂಡು
ಹಾರಿ ಹೋಯಿತು !
(ಕವಿ : ಸುಬ್ರಹ್ಮಣ್ಯ ಭಟ್ )
***

Thursday, November 13, 2008

ಆನೆ

ಆನೆ ಬಂತೊಂದಾನೆ
ಯಾವೂರಾನೆ ?
ಮದವೂರಾನೆ
ದೊಡ್ಡ ಕಿವಿಯಾನೆ
ಸಣ್ಣ ಕಣ್ಣಿನ ಆನೆ
ಗಿಡ್ಡ ಬಾಲದಾನೆ
ಕಬ್ಬು ತಿನ್ನೋ ಆನೆ
ಆನೆ ಬಂತೊಂದಾನೆ
ಯಾವೂರಾನೆ ?
ಮದವೂರಾನೆ
***

Wednesday, November 12, 2008

ವಾಚಾಳಿ ಆಮೆ ...

ಆಮೆಯೊಂದು ಕೆರೆಯ ದಡದಿ
ಮನೆಯ ಮಾಡಿತು

ಹಕ್ಕಿಯಂತೆ ಹಾರಬೇಕು
ಎಂದು ಬಯಸಿತು

ಗೆಳೆಯ ಹಕ್ಕಿಗಳನು
ಕಂಡು ಆಸೆ ತಿಳಿಸಿತು

ಹಕ್ಕಿಯೆರಡು ಆಮೆ
ಮಾತ ಒಪ್ಪಿಕೊಂಡವು

ಅತ್ತ ಇತ್ತ ಹಕ್ಕಿಯೆರಡು
ಬಾಡಿಗೆ ಹಿಡಿದವು

ಆಮೆ ಅದಕೆ ಜೋತು ಬೀಳೆ
ಹಾರಿಹೋದವು

ದಾರಿಯಲ್ಲಿ ಇದನು ಕಂಡ
ಜನರು ನಕ್ಕರು

ಮಾನ ಹೋಯಿತೆಂದು ಆಮೆ
ಮನದಿ ಕುದಿಯಿತು

ನಕ್ಕ ಜನರ ಬೈಯ್ಯಲೆಂದು
ಬಾಯಿ ತೆರೆಯಿತು

ಮೇಲಿನಿಂದ ಕೆಳಗೆ ಬಿದ್ದು
ಸತ್ತು ಹೋಯಿತು !
***

Tuesday, November 11, 2008

ಬಾರಿಸು ಕನ್ನಡ ಡಿಂಡಿಮವ ....ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ


ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು


ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ


ಕ್ಷಯಿಸಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ

ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

(ಕವಿ : ಕುವೆಂಪು )

***

Monday, November 10, 2008

ಮಿಂಚು ಹುಳು

ಮಿಂಚುಹುಳುವೆ ಬಾ ಬಾ
ನನ್ನ ಬಳಿಗೆ ಬಾ ಬಾ
ಮಿಣಿ ಮಿಣಿ ಮಿನುಗುತ ಬಾ ಬಾ
ಹಾರುತ ಹಾರುತ ಬಾ ಬಾ
ಕತ್ತಲೆಯಲ್ಲಿ ಮಿಂಚುವೆ ನೀನು
ನಿನ್ನನು ಹಿಡಿಯಲು ಬರುವೆನು ನಾನು
ಹತ್ತಿರ ಬಂದರೆ ಹಾರುವೆ ನೀನು
ಹೇಗೆ ಹಿಡಿಯಲಿ ನಿನ್ನನು ನಾನು
ಮಿಂಚುಹುಳುವೆ ಬಾ ಬಾ
ನನ್ನ ಬಳಿಗೆ ಬಾ ಬಾ
***

Sunday, November 9, 2008

ಜೇನು ನೊಣ

ಜೇನು ನೊಣವೆ ಜೇನು ನೊಣವೇ
ಎಲ್ಲಿ ಹೋಗುವೆ ?
ಜುಂಯ್ ಜುಂಯ್ ಸದ್ದು ಮಾಡಿ

ಹಾರುವುದೆಲ್ಲಿಗೆ ?


ವನವನಲೆದು ಜೇನ ತರಲು
ನಾನು ಹೋಗುವೆ
ವನದಿ ಬಿರಿದ ಕುಸುಮಗಳಿಗೆ ಮುತ್ತನಿಕ್ಕುವೆ
ನಾನು ಬರಲೇ ನಿನ್ನ ಜೊತೆಗೆ
ವನವ ನೋಡಲು ಹೂವುಗಳನು ನೋಡಿ
ಹಣ್ಣು ಗಳನು ಮೆಲ್ಲಲು ?
ನೋಡು ಬಾಲ ನನಗೆ ಎರಡು
ರೆಕ್ಕೆ ಇಲ್ಲಿವೆ
ನನ್ನ ಜೊತೆಗೆ ಬರಲು ನಿನಗೆ ರೆಕ್ಕೆ ಎಲ್ಲಿದೆ?
ನಿನಗೆ ನಿನ್ನ ಮನೆಯೇ ಅಂದ
ಅಣ್ಣ ತಮ್ಮ ಅಕ್ಕ ತಂಗಿ
ಎಲ್ಲ ಸೇರಿ ಅದೇ ಚಂದ
ಹೋಗಿ ಆಡೋ ಅಲ್ಲಿ ನೀನು
ಮುದ್ದು ಕಂದನೆ !
(ಕವಿ :ಸುಬ್ರಹ್ಮಣ್ಯ ಭಟ್ )
***

Saturday, November 8, 2008

ವಸಂತ ಬಂದ ...
ವಸಂತ ಬಂದ ಋತುಗಳ ರಾಜ ತಾ ಬಂದ

ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ

ಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದ

ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !


ಕುರಿ ನೆಗೆದಾಟ ಕುರುಬರ ಕೊಳಲಿನೂದಾಟ

ಇನಿಯರ ಬೇಟ ಬನದಲಿ ಬೆಳದಿಂಗಳೂಟ

ಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠ

ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !


ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು

ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು

ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು

ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !

ಬಂದ ವಸಂತ -ನಮ್ಮಾ

ರಾಜ ವಸಂತ !!

(ಕವಿ : ಬಿ. ಎಂ.ಶ್ರೀ. )
***

Friday, November 7, 2008

ತಿಳಿಮುಗಿಲ ತೊಟ್ಟಿಲಲಿತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ

ಗಾಳಿ ಜೋಗುಳ ಹಾಡಿ ತೂಗುತಿತ್ತು

ಗರಿ ಮುದುರಿ ಮಲಗಿತ್ತ ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ ಸಾಗುತಿತ್ತು

ಮುಗುಳಿರುವ ಹೊದರಿನಲಿ ನರುವಂತಿನುದರದಲಿ
ಜೇನುಗನಸಿನ ಹಾಡು ಕೇಳುತಿತ್ತು

ತುಂಬು ನೀರಿನ ಹೊಳೆಯೊಳ೦ಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನು ಹೇಳುತಿತ್ತು


ಬರುವ ಮುಂದಿನ ದಿನದ ನವನವೋದಯಕ್ಕಾಗಿ

ಪ್ರಕೃತಿ ತಪವಿರುವಂತೆ ತೋರುತ್ತಿತ್ತು

ಶಾಂತ ರೀತಿಯರಿರುಳು ಮೆಲ್ಲ ಮೆಲ್ಲನೆ ಉರುಳಿ
ನಾಳಿನಾ ಶುಭೋದಯವ ಸಾರುತಿತ್ತು .


(ಕವಿ :ಎಸ್ ವಿ. ಪರಮೇಶ್ವರ ಭಟ್ಟ )

***


Thursday, November 6, 2008

ಕೋಳಿ ಮರಿ ...

ಕೋಳಿ ಮರಿ ಕೋಳಿ ಮರಿ
ಎಲ್ಲಿ ಹೋಗುವೆ ?
ತಾಯಿ ಕೋಳಿಯನ್ನು ಬಿಟ್ಟು
ಏಕೆ ಬಂದೆಯೇ?
ಚೀಂವ್ ಚೀಂವ್ ಎಂದು ಕೂಗಿ
ಏನು ಹುಡುಕುವೆ ?
ಇತ್ತ ಬಾ ಕಾಳು ಕಡ್ಡಿ
ನಾನು ತೋರುವೆ !
***

Wednesday, November 5, 2008

ಪ್ರಾರ್ಥನೆ

ಮಹಾನಂದ ವಿಶ್ವರೂಪ
ಮಹಿಮಾಂತರಂಗ
ಶಕ್ತಿದಾಯಕ ಸ್ವಾಮೀ
ಮುಕ್ತಿದಾಯಕ
ತಂದೆಯು ನೀನೆ
ತಾಯಿಯು ನೀನೆ
ಬಂಧುವು ಬಳಗವು
ಎಲ್ಲವೂ ನೀನೆ
ವಿದ್ಯೆ ಕೊಡುವ ದೇವಾ ನೀನೆ
ಬುದ್ದಿ ಕೊಡುವ ದಾತಾ ನೀನೆ
ನಂಬಿಹೆವು ನಾವು ನಿನ್ನ
ತೊರೆಯಬೇಡ ಮಹಿಮಾ
ಮಹಾನಂದ ವಿಶ್ವರೂಪ
ಮಹಿಮಾಂತರಂಗ
ಶಕ್ತಿದಾಯಕ ಸ್ವಾಮೀ
ಮುಕ್ತಿದಾಯಕ
***

Tuesday, November 4, 2008

ಮಲ್ಲಿಗೆ ..


ಮಲ್ಲಿಗೆ ಮಲ್ಲಿಗೆ
ಮಂಗಳೂರು ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ಬಿಳಿ ಬಿಳಿ ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ಘಮ ಘಮ ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ದುಂಡು ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ಸೂಜಿ ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ನಿತ್ಯ ಮಲ್ಲಿಗೆ


ಮಲ್ಲಿಗೆ ಮಲ್ಲಿಗೆ
ಬೇಕೆ ಮಲ್ಲಿಗೆ ?
ಘಮ ಘಮ ಮಲ್ಲಿಗೆ
***


Monday, November 3, 2008

ಮೀನು

ನೀರಿನಲ್ಲಿ ಈಜುವ ಮೀನು
ಏನನು ಹುಡುಕುತ ಸುತ್ತುವೆ ನೀನು ?
ರೆಕ್ಕೆಯ ಬೀಸಿ ಈಜುವೆ ನೀನು
ಕೈಯನು ಬೀಸಿ ನಡೆಯುವೆ ನಾನು
ಬಾಲವ ಬೀಸಿ ಓಡುವೆ ನೀನು
ಕಾಲಿನಿಂದಲೇ ಓಡುವೆ ನಾನು
ಹಿಡಿಯಲು ಬಂದರೆ ಸಿಗದಿರೆ ನೀನು
ಬಲೆಯನು ಬೀಸಿ ಹಿಡಿಯುವೆ ನಾನು !
ನಿನ್ನ ಹಾಗೆ ಈಜುವ ಆಸೆಯು ನನಗೆ
ನನ್ನ ಹಾಗೆ ಓಡುವ ಆಸೆಯೇ ನಿನಗೆ ?
***

Sunday, November 2, 2008

ಗಿಳಿ

ಹಾರುತ ಹಾರುತ
ಮಾವಿನ ಮರಕೆ
ಗಿಳಿಯು ಬಂತಣ್ಣ

ಹಸಿರೆಲೆ ಬಣ್ಣ
ಅದಕಿದೆ ಅಣ್ಣಾ
ನೋಡಲು ಬಲು ಚೆನ್ನ

ಕೊಕ್ಕಿನ ಬಣ್ಣ
ಕೆಂಪು ಬಣ್ಣ
ಚೆನ್ನಾಗಿದೆಯಲ್ಲವೇನಣ್ಣ?
***