Wednesday, July 29, 2009

ಅಕ್ಕನ ಮದುವೆ...



ಅಕ್ಕನ ಮದುವೆಗೆ
ಭಾರೀ ದಿಬ್ಬಣ
ಬೆಳಗ್ಗೆ ಬಂದಿತ್ತು


ತಮ್ಮನ ಕೂಡೆ
ಪುಟ್ಟನ ಸ್ವಾಗತ
ಭರ್ಜರಿ ನಡೆದಿತ್ತು


ಬ್ಯಾಂಡು ವಾಲಗ
ಸಂಭ್ರಮ ಸಡಗರ
ಚಪ್ಪರದೊಳಗಿತ್ತು


ಮಂಟಪ ತುಂಬ
ಹೂವಿನ ಪರಿಮಳ
ಮೆಲ್ಲನೆ ಹರಡಿತ್ತು


ಭಾವನು ಬಂದು
ಅಕ್ಕನ ಕೈಯ್ಯನು
ಹಿಡಿದೇ ಆಗಿತ್ತು


ಅಡುಗೆ ಭಟ್ಟರು
ಹಪ್ಪಳ ಹುರಿವ
ತಯಾರಿ ನಡೆದಿತ್ತು


ಎಲ್ಲರು ಕುಳಿತು
ಊಟವ ಮುಗಿಸಲು
ಮದುವೆ ಮುಗಿದಿತ್ತು .

***

Monday, July 27, 2009

ಇಲಿರಾಯ ...





ಮನೆಯ ಬಿಲದಲಿ

ವಾಸವ ಮಾಡುವ

ಉದ್ದನೆ ಬಾಲದ ಇಲಿರಾಯ



ತಿಂಡಿಯ ನಾನು

ಎಲ್ಲೇ ಇಟ್ಟರೂ

ರುಚಿಯನು ನೋಡುವ ಇಲಿರಾಯ !



ಮಕ್ಕಳು ಮರಿಗಳು

ಎಲ್ಲರ ಸೇರಿಸಿ

ಗುಲ್ಲನು ಎಬ್ಬಿಸೋ ಇಲಿರಾಯ



ವರ್ಷಕ್ಕೊಮ್ಮೆ ಬಂದರೆ

ನಿನ್ನನು ಚೌತಿಗೆ ಪೂಜಿಸುವೆ

ದಿನವೂ ಬಂದರೆ ಓಡಿಸುವೆ !


***

Monday, July 13, 2009

ಬಾಲ ಗೋಪಾಲ ...



ಬಾಲ ಗೋಪಾಲ ಸದಾನಂದ
ಹಾಲ ಕೊಡುವೆ ಬಾ ಗೋವಿಂದ


ಬೆಣ್ಣೆಯಿದೆ ತಕೋ ಯದುಚಂದ್ರ
ಹಣ್ಣು೦ಟಿಲ್ಲಿಯೆ ಗುಣಸಾಂದ್ರ


ಚಿನ್ನದ ಕೊಳಲಿದೆ ಬಾರಯ್ಯ
ಇನ್ನಾದರು ದಯ ತೋರಯ್ಯ


ಬಾಲ ಗೋಪಾಲ ಸದಾನಂದ
ಹಾಲ ಕೊಡುವೆ ಬಾ ಗೋವಿಂದ

***
(ನನ್ನ ಅಮ್ಮ ಮಕ್ಕಳನ್ನು ತೊಟ್ಟಿಲಲ್ಲಿ ತೂಗುವಾಗ ಹೇಳುತ್ತಿದ್ದ ಪದ್ಯ )

Saturday, July 11, 2009

ಮೊಲದ ಮರಿ ..




ಪೊದರಿನ ಬಳಿಯಲಿ

ಆಡುತಲಿರುವ ಮುದ್ದಿನ

ಮೊಲದ ಮರಿ



ಚಿಗುರೆಲೆ ಮೆಲ್ಲುತ

ಕಿವಿಯನು ನಿಮಿರಿಸಿ

ನೋಡುವುದೇಕೀ ಪರಿ ?



ಅಮ್ಮನ ಕೂಡುತ

ತಮ್ಮನ ಸೇರುತ

ಆಡಲು ಬರಲೇ ನಾನು?



ಕಾಡಿನ ಬಳಿಗೆ

ಓಡದೆ ನೀನು

ನನ್ನೊಡನಾಡುವೆಯೇನು ?


***

Thursday, July 9, 2009

ಹಣತೆ ...




ಸುತ್ತಲ ಕತ್ತಲೆ

ಕಳೆಯುತ ಬೆಳಕನು

ನೀಡುವ ಪುಟ್ಟ ಹಣತೆ



ಮಂದ ಪ್ರಕಾಶವ

ಬೀರುತ ನಿಂತಿಹೆ

ಸರತಿಯ ಸಾಲಿನಲೇಕೆ ?



ಚಂದಿರನಿರದ ರಾತ್ರಿಯ

ತುಂಬ ನಿನ್ನ

ಪ್ರಕಾಶವು ಸಾಕೆ ?



ನಿನ್ನಯ ಬಿಂಬವ

ನೋಡುತ ನಾನು

ಬರೆಯಲೇ ಒಂದು ಕವಿತೆ ?


***


Monday, July 6, 2009

ಅಜ್ಜನ ಮೀಸೆ ...



ಬೆಳ್ಳನೆ ಹತ್ತಿಯ
ಹೊಸೆದು ತೀಡಿದ
ಬತ್ತಿಯಂತೆ ಕಾಣುವುದು


ಮುದ್ದಿನ ಅಜ್ಜನ
ಮುಖದ ಮೇಲಿನ
ಬೆಳ್ಳನೆ ಮೀಸೆ ಹೊಳೆಯುವುದು


ಅಜ್ಜಿಗೆ ಭೀತಿ
ಅಜ್ಜಗೆ ಪ್ರೀತಿ
ಮುದ್ದಿನ ಮೀಸೆ ಬೆಳೆಯುವುದು


ಮೀಸೆಯ ಹೊತ್ತು
ನೆಟ್ಟನೆ ನಡೆಯುವ
ಅಜ್ಜನ ಆಸೆ ಫಲಿಸುವುದು !

***