Sunday, October 3, 2010

ಬೆಕ್ಕು

ಎಲೆಲೆ ಬೆಕ್ಕೆ
ನಿನ್ನ ಸೊಕ್ಕೆ ಕಳ್ಳತನದಲಿ 

ಹಿರಿದು ಮೊಸರು 
ಬೆಣ್ಣೆ ಕದ್ದು ತಿಂಬೆ ಮುದದಲಿ  

ಹುಲಿಯ ರೂಪ 
ನಿನಗೆ ಇದ್ದರೇನು ವ್ಯರ್ಥವು 

ಹುಲಿಯ ಹಾಗೆ 
ಬಲುಮೆ ನಿನಗೆ ಇಲ್ಲ ಸತ್ಯವು 


ಇಲಿಯ ಹಿಡಿದು 
ಅದನು ಕೊಂದು ತಿಂದು ತೇಗುವೆ 

ನಲವ ಹೊಂದಿ 
ಮಿಯಾ೦ವ್  ಮಿಯಾ೦ವ್ ಎಂದು ಕೂಗುವೆ 

                                                           -ಕೃಪೆ : ಗಿರಿಜಾ ಪಿ. 


Wednesday, July 14, 2010

ಗಾಳಿಪಟ



ಬಣ್ಣದ ಹಾಳೆಯ
ತೆಂಗಿನ ಕಡ್ಡಿಯ
ಉದ್ದನೆ ಬಾಲದ ಗಾಳಿಪಟ


ದಾರವ ಎಳೆದು
ಓಡುತ ಜಿಗಿದು
ಹಾರಿಸಿ ನಲಿಯಲು ಗಾಳಿಪಟ


ಮುಗಿಲನು ಚುಂಬಿಸಿ
ಗಿಡುಗನ ಅಂಜಿಸಿ
ಗಾಳಿಪಟವು ಹಾರುವುದು


ಬಾನಲಿ ಹಾರುತ
ಮೇಲಕೆ ಏರುತ
ಪಟ ಪಟ ಸದ್ದನು ಮಾಡುವುದು

***


Thursday, June 17, 2010

ತುಂತುರು ಮಳೆ



ಬಾನಿನಿಂದ ಭುವಿಗೆ ಬಂತು
ತುಂತುರು ಮಳೆ
ಪಚ್ಚೆ ಪೈರು ಬೆಳೆದು
ಇಳೆಗೆ ತುಂಬಿತು ಕಳೆ


ಹೊಳೆಯು ಉಕ್ಕಿ ಹರಿದು
ಬಂತು ಜೀವ ಕಳೆ
ನೀರ ಚಿಲುಮೆ ನೋಡಿ
ನೀನು ಸಂತಸ ತಳೆ


ಹೊಲವ ರೈತ ಉತ್ತು
ಬಿತ್ತಿ ಬೆಳೆದನು ಬೆಳೆ
ಕಣಜ ಧಾನ್ಯದಿಂದ ತುಂಬಿ
ಹರುಷವಾಯ್ತು ನೆಲೆ

Wednesday, June 2, 2010

ಎಂಥ ಸಮಯ ..



ಅರಳಿದ ಹೂಗಳ
ಪರಿಮಳ ಸವಿಯಲು
ಆಹಾ ! ಎಂಥ ಸಮಯವದು

ಮೆಲ್ಲನೆ ಚಂದಿರ
ಮೂಡುತ ಬರುವ
ಆಹಾ! ಸುಂದರ ನೋಟವದು

ಮಂದ ಪ್ರಕಾಶದಿ
ಬೆಳಗುವ ದೀಪವು
ಕತ್ತಲೆಯನು ತಾ ಕಳೆಯುವುದು

ಅಜ್ಜಿಯು ಹೇಳುವ
ಕಥೆಯನು ಕೇಳಲು
ಎನ್ನಯ ಮನವು ತವಕಿಪುದು .

Saturday, May 29, 2010

ನಾನು ಬರಲೇ ?




ಹಾಡನು ಹಾಡುತ
ಮರದ ಮರೆಯಲಿ
ಕುಳಿತಿಹೆ ಏತಕೆ ಕೋಗಿಲೆಯೇ ?


ಮಾವಿನ ಚಿಗುರನು
ಮೆಲ್ಲುತ ಮೆಲ್ಲನೆ
ಹಾಡುವೆ ಕುಹೂ ಕುಹೂ ಕೋಗಿಲೆಯೇ ?


ನಾನು ಬರುವೆ
ಹಾಡಲು ಕಲಿಸು
ಹತ್ತಿರ ಬರುವೆಯ ಕೋಗಿಲೆಯೇ ?
***

Wednesday, March 17, 2010

ನಾಚಿದ ಚಂದಿರ ..


ಮೂಡಿದ ಸೂರ್ಯನು
ಮುಳುಗುವ ಸಮಯಕೆ
ಮಲ್ಲಿಗೆ ಹೂವು
ಅರಳುವ ಸಮಯಕೆ


ಹಕ್ಕಿಯು ಗೂಡನು
ಸೇರುವ ಸಮಯಕೆ
ದೇವರ ದೀಪ
ಉರಿಸುವ ಸಮಯಕೆ


ಸ್ನಾನವ ಮುಗಿಸಿ
ಸೇರುವ ಸಮಯಕೆ
ಭಜನೆಯ ಮಾಡಿ
ಹಾಡುವ ಸಮಯಕೆ


ಕಂದನು ಮೆಲ್ಲನೆ
ನಗುತಿಹ ಸಮಯಕೆ
ಚಂದಿರ ನಾಚಿ
ಸರಿದನು ಮರೆಗೆ
***

Friday, March 12, 2010

ದೋಸೆ



ಕಾವಲಿ ಮೇಲೆ
ಬಿಸಿ ಬಿಸಿ ದೋಸೆ
ನೋಡಿದ ಮೇಲೆ
ತಿನ್ನುವ ಆಸೆ

ಅಕ್ಕಿ ಉದ್ದು
ಹಾಕಿದ ದೋಸೆ
ಅಮ್ಮನು ಮಾಡಿದ
ಮಸಾಲೆ ದೋಸೆ

ತಿನ್ನಲು ರುಚಿಕರ
ಈರುಳ್ಳಿ ದೋಸೆ
ನೋಡಲು ಹಿತವದು
ಬಗೆ ಬಗೆ ದೋಸೆ

ಹಲವು ಕಣ್ಣಿನ
ಮೆತ್ತನೆ ದೋಸೆ
ತಿನ್ನುತ ಮುಗಿಸುವೆ
ದೋಸೆಯ ಆಸೆ !

Saturday, January 30, 2010

ತಾರಾ ನಾಯಕ ...



ಮೋಡದ ಮರೆಯಲಿ
ಓಡುವ ಚಂದಿರ
ಕಣ್ಣ ಮುಚ್ಚಾಲೆ ಆಡುವೆಯ ?



ಮಲ್ಲಿಗೆ ಪರಿಮಳ
ಪಸರಿಪ ಸಮಯಕೆ
ಮೆಲ್ಲನೆ ಬಾನಲಿ ಮೂಡುವೆಯ?



ಬಾನಲಿ ಬೆಳ್ಳಿಯ
ಬೆಳಕನು ಬೀರುತ
ತಾರಾನಾಯಕ ನಗುತಿಹೆಯ ?


ಮಕ್ಕಳ ಮನದಲಿ
ಸಂತಸ ಉಕ್ಕಿಸಿ
ಮನಸಿಗೆ ಮುದವನು ನೀಡುವೆಯ?


***

Monday, January 4, 2010

ನೆಲ್ಲಿಕಾಯಿ


ಬೆಟ್ಟದ ಮೇಲಿನ ನೆಲ್ಲಿಕಾಯಿ
ಮರದಲಿ ತುಂಬಿಹ ನೆಲ್ಲಿಕಾಯಿ

ತಿನ್ನಲು ಹುಳಿ ಹುಳಿ ನೆಲ್ಲಿಕಾಯಿ
ನೀರನು ಕುಡಿಯೆ ಸಿಹಿಯದು ಬಾಯಿ

ಸೇರಿಸೆ ಉಪ್ಪನು ನೆಲ್ಲಿಕಾಯಿ
ಮಾಡುವಳಮ್ಮ ಉಪ್ಪಿನಕಾಯಿ

ರುಚಿಯನು ಹೆಚ್ಚಿಪ ನೆಲ್ಲಿಕಾಯಿ
ಪ್ರಕೃತಿ ಕಾಣಿಕೆ ನೆಲ್ಲಿ ಕಾಯಿ
***