Friday, August 29, 2008

ಹಕ್ಕಿ

ಪುಟ್ಟ ಪುಟ್ಟ ಹಕ್ಕಿ
ಪುಟಾಣಿ ಹಕ್ಕಿ
ಚಿಕ್ಕ ಕಣ್ಣಿನ ಹಕ್ಕಿ
ಸಣ್ಣ ಕೊಕ್ಕಿನ ಹಕ್ಕಿ
ಕಾಳು ತಿನ್ನುವ ಹಕ್ಕಿ
ನೀರು ಕುಡಿಯುವ ಹಕ್ಕಿ
ಮೇಲೆ ಹಾರೋ ಹಕ್ಕಿ
ಗೂಡು ಸೇರೋ ಹಕ್ಕಿ

ನೆಲದ ಕರೆ ..

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ
ದಿನದಿನವು ಕಾದು ಬಾಯಾರಿ ಬೆಂದೆ
ಬೆಂಗದಿರ ತಾಪದಲ್ಲಿ
ನನ್ನೆದೆಯ ಹಸಿರ ಉಸಿರು ಕುಗ್ಗಿದರು
ಬರಲಿಲ್ಲ ನಿಮಗೆ ಕರುಣ
ನನ್ನ ಹೃದಯದಲಿ ನೋವು ಮಿಡಿಯುತಿದೆ
ನಾನು ನಿಮಗೆ ಶರಣ
ಬಡವಾದ ನನ್ನ ಒಡಲುರಿಯ ಬೇಗೆ
ನಿಮಗರಿವು ಆಗಲಹುದೆ?
ನೀಲ ಗಗನದಲಿ ತೇಲಿ ಹೋಗುತಿಹ
ನಿಮ್ಮನೆಳೆಯಬಹುದೆ ?
ಬಾಯುಂಟು ನನಗೆ ಕೂಗ ಬಲ್ಲೆ ನಾ
ನಿಮ್ಮೆದೆಯ ಪ್ರೇಮವನ್ನು
ನೀವು ಕರುಣಿಸಲು ನನ್ನ ಹಸಿರೆದೆಯು
ಉಸಿರುವುದು ತೋಷವನ್ನು
ಓ ಬನ್ನಿ ಬನ್ನಿ ಓ ಬನ್ನಿ ಬನ್ನಿ
ನನ್ನೆದೆಗೆ ತಂಪ ತನ್ನಿ
ನೊಂದ ಜೀವರಿಗೆ ತಂಪನೀಯುವುದೇ
ಪರಮ ಪೂಜೆಯೆನ್ನಿ
(ಕವಿ : ಜಿ. ಎಸ್ . ಶಿವರುದ್ರಪ್ಪ )

***


Thursday, August 28, 2008

ಊಟದ ಆಟ

ಒಂದು ಎರಡು ಬಾಳೆಲೆ ಹರಡು
ಮೂರು ನಾಲ್ಕು ಅನ್ನ ಹಾಕು
ಐದು ಆರು ಬೇಳೆ ಸಾರು
ಏಳು ಎಂಟು ಪಲ್ಯಕೆ ದಂಟು
ಒಂಭತ್ತು ಹತ್ತು ಎಲೆ ಮುದುರೆತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗಿದಿತ್ತು .
(ಕವಿ : ಜಿ.ಪಿ. ರಾಜರತ್ನಂ )
***

Wednesday, August 27, 2008

ಜಾನಪದ ಗೀತೆ

ಮುಂಗೋಳಿ ಕೂಗ್ಯಾವು ಮೂಡು ಕೆಂಪೇರ್ಯಾವು
ಸ್ವಾಮೀ ನನ್ನಯ್ಯ ರಥವೇರಿ
ಬರುವಾಗ ನಾವೆದ್ದು ಕೈಯ್ಯ ಮುಗುದೇವು

ಮಕ್ಕಳಾಟವು ಚಂದ ಮತ್ತೆ ಯೌವನ ಚಂದ
ಮುಪ್ಪಿನಲಿ ಚಂದ ನರೆಗಡ್ಡ
ಜಗದೊಳಗೆ ಎತ್ತ ನೋಡಿದರೂ ನಗು ಚಂದ

ಹಾಲ್ಬೇಡಿ ಅತ್ತಾನ ಕೊಲ್ಬೇಡಿ ಕುಣುದಾನ
ಮೊಸರ್ಬೇಡಿ ಕೆಸರಾ ತುಳುದಾನ
ಕಂದನ ಕುಸುರಾದ ಗೆಜ್ಜೆ ಕೆಸರಾಯ್ತು

ಕಪ್ಪೆಂದು ಜನರನ್ನು ಎತ್ಯಾಡದಿರು ಕಂಡ್ಯ
ಕಪ್ಪಾದ ಹಸುವು ಕರೆದಾರೆ
ಆ ಹಾಲು ಒಪ್ಪೀತು ಶಿವನ ಪೂಜೆಗೆ
ಎಲ್ಲಾದರು ಇರಲವ್ವ ಹುಲ್ಲಾಗಿ ಬೆಳೆಯಾಲಿ
ನೆಲ್ಲಿ ಬುಡ್ಯಾಗಿ ಚಿಗಿಯಾಲಿ
ನನ ಕಂದ ಜಯವನ್ತನಾಗಿ ಮೆರೆಯಾಲಿ
****

ಅನಿಕೇತನ

ಓ ನನ್ನ ಚೇತನ,
ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗ೦ತವಾಗಿ ಏರಿ,
ಓ ನನ್ನ ಚೇತನ,ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,ಆಗು ನೀ ಅನಿಕೇತನ!

ಅನ೦ತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,ಆಗು ನೀ ಅನಿಕೇತನ!
(ಕವಿ : ಕುವೆಂಪು )
****

Tuesday, August 26, 2008

ಮಂಗಗಳ ಉಪವಾಸ

ಬಾಳೆಯ ತೋಟದ ಪಕ್ಕದ ಕಾಡೊಳು
ವಾಸಿಸುತಿದ್ದವು ಮಂಗಗಳು
ಮಂಗಗಳೆಲ್ಲವು ಒಟ್ಟಿಗೆ ಸೇರುತ
ಒಂದುಪವಾಸವ ಮಾಡಿದವು .
ಏನೂ ತಿನ್ನದೆ ಮಟ ಮಟ ನೋಡುತ
ಇದ್ದವು ಮರದಲಿ ಕುಳಿತಲ್ಲೇ
"ನಾಳೆಗೆ ತಿಂಡಿಯ ಈಗಲೇ ಹುಡುಕುವ
ಬನ್ನಿರಿ " ಎಂದಿತು ಕಪಿಯೊಂದು
"ಹೌದೌದಣ್ಣಾ" ಎಂದೆನ್ನುತ ಎಲ್ಲವು
ಬಾಳೆಯ ತೋಟಕೆ ಹಾರಿದವು
ತೋಟದಿ ಬಾಳೆಯ ಹಣ್ಣನು ನೋಡಲು
ಆಶೆಯು ಹೆಚ್ಚಿತು ನೀರೂರಿ
"ಸುಲಿದೇ ಇಡುವ ಆಗದೆ " ಎಂದಿತು
ಆಶೆಯ ಮರಿಕಪಿಯೊಂದಾಗ
"ಹೌದೌದೆನ್ನುತ" ಹಣ್ಣನು ಸುಲಿದವು
ಕೈಯೊಳೆ ಹಿಡಿದು ಕುಳಿತಿರಲು
"ಕೈಯ್ಯಲ್ಲೇತಕೆ ಬಾಯೊಳಗಿಟ್ಟರೆ
ಆಗದೆ ? " ಎಂದಿತು ಇನ್ನೊಂದು
ಹಣ್ಣನು ಬಾಯಲಿ ಇಟ್ಟವು
"ಜಗಿದೇ ಇಡುವೆವು " ಎಂದಿತು
ಕಪಿ ಮತ್ತೊಂದು
ಜಗಿದೂ ಜಗಿದೂ ನುಂಗಿದವೆಲ್ಲವು
ಆಗಲೇ ಮುಗಿಯಿತು ಉಪವಾಸ .
(ಕವಿ : ಮಚ್ಚಿಮಲೆ ಶಂಕರನಾರಾಯಣ ರಾವ್ )
****

ವನಸುಮ ...

ವನಸುಮದೊಲೆನ್ನ ಜೀವನವು
ವಿಕಸಿಸುವಂತೆ ಮನವನನುಗೊಳಿಸು
ಗುರುವೇ ಹೇ ದೇವ
ಜನಕೆ ಸಂತಸನೀವ ಘನನು
ನಾನೆಂದೆಂಬ ಎಣಿಕೆ ತೋರದೆ
ಜಗದ ಪೊಗಳಿಕೆಗೆ ಬಾಯ್ಬಿಡದೆ
ಕಾನನದಿ ಮಲ್ಲಿಗೆಯು ಮೌನದಿ೦
ಬಿರಿದು ನಿಜಸೌರಭವನು ಸೂಸಿ
ತಾನೆಲೆಯ ಪಿಂತಿರ್ದು ದೀನತೆಯ ತೋರಿ
ಅಭಿಮಾನವನು ತೊರೆದು ಕೃತಕೃತ್ಯತೆಯನು ಪಡೆವಂತೆ
ಉಪಕಾರಿ ತಾನು ಎನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾದಪದಂತೆ
ನೈಜಮಾದೊಳ್ಪಿನಿ0 ಬಾಳ್ವವೊಲು

(ಕವಿ: ಡಿ.ವಿ.ಜಿ .)
***

Monday, August 25, 2008

ಬಾ ಬಾ ಗಿಳಿಯೇ ..



ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ
ಹಣ್ಣನು ಕೊಡುವೆನು ಬಾ ಬಾ
ಹಸಿರು ಪುಕ್ಕದ ಚೆಂದದ ಗಿಳಿಯೇ
ನನ್ನೊಡನಾಡಲು ಬಾ ಬಾ

ಕೆಂಪು ಮೂಗಿನ ಮುದ್ದಿನ ಗಿಳಿಯೇ
ಹಾಡನು ಕಲಿಸುವೆ ಬಾ ಬಾ
ಮರದಲಿ ಕುಳಿತು ನೋಡುವೆ ಏಕೆ ?
ಹಾರುತ ಹತ್ತಿರ ಬಾ ಬಾ


ಠಕ್ಕಿನ ಕಾಮಿ ಮನೆಯೊಳಗಿಲ್ಲ
ಹೆದರುವೆ ಏಕೆ ಬಾ ಬಾ
ಸೊಕ್ಕಿನ ಟಾಮಿ ಹತ್ತಿರವಿಲ್ಲ
ಕುಣಿ ಕುಣಿದಾಡುತ ಬಾ ಬಾ


ಹಾಡುವುದನ್ನು ಕಲಿಸುವೆ ನಿನಗೆ
ಹಾರಲು ಕಲಿಸು ಬಾ ಬಾ
ಹಣ್ಣನು ತಿಂದು ಹಾಲನು ಕುಡಿದು
ಮುಗಿಲಿಗೆ ಹಾರುವ ಬಾ ಬಾ

(ಕವಿ :ಶಂ.ಗು. ಬಿರಾದಾರ)
****

ಕಾಮನ ಬಿಲ್ಲು

ಕಾಮನ ಬಿಲ್ಲು ಕಮಾನು ಕಟ್ಟಿದೆ
ಮೋಡದ ನಾಡಿನ ಬಾಗಿಲಿಗೆ !
ಬಣ್ಣಗಳೇಳನು ತೋರಣ ಮಾಡಿದೆ
ಕಂದನ ಕಣ್ಣಿಗೆ ಚಂದವನೂಡಿದೆ
ಹಣ್ಣಿನ ಹೂವಿನ ಹೊನ್ನನು ಕೂಡಿದೆ
ಮಕ್ಕಳಿಗೋಕುಳಿಯಾಟವನಾಡಿದೆ
ತೆಂಗಿನ ತೋಟದ ಬುಡದಲಿ ಮೂಡಿದೆ
ಭೂಮಿಗೆ ಬಾನಿಗೆ ಸೇತುವೆ ಹೂಡಿದೆ
ಕಾಮನ ಬಿಲ್ಲು ಕಮಾನು ಕಟ್ಟಿದೆ
ಮೋಡದ ನಾಡಿನ ಬಾಗಿಲಿಗೆ !
(ಕವಿ : ಕುವೆಂಪು )
***


Sunday, August 24, 2008

ನಾಯಿ ಮರಿ


ನಾಯಿಮರಿ ನಾಯಿಮರಿ
ತಿಂಡಿ ಬೇಕೆ ?
ತಿಂಡಿ ಬೇಕು ತೀರ್ಥ ಬೇಕು
ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ
ಏಕೆ ಬೇಕು ?
ತಿಂದು ಗಟ್ಟಿಯಾಗಿ ಮನೆಯ
ಕಾಯಬೇಕು

ನಾಯಿಮರಿ ಕಳ್ಳ ಬಂದರೇನು
ಮಾಡುವೆ ?
ಲೊಳ್ ಲೊಳ್ ಭೌ ಎಂದು
ಕೂಗಿಯಾಡುವೆ

ಜಾಣಮರಿ ನಾನು ಹೋಗಿ
ತಿಂಡಿ ತರುವೆನು
ತಾ ! ನಿನ್ನ ಮನೆಯ ನಾ
ಕಾಯುತಿರುವೆನು !


(ಕವಿ :ಜೆ. ಪಿ. ರಾಜರತ್ನಂ )

***

ಸರಸರ ಕನ್ನಡ ...


ಸರಸರ ಕನ್ನಡ ಓದಲು ಬರೆಯಲು
ಕಲಿಸಿದ ತಾಯಿಗೆ ನಮೋ ನಮೋ
ಸ್ವರ ವ್ಯಂಜನಗಳ ಪದ್ಧತಿಯರುಹಿದ
ಶಾರದಾಂಬೆಗೆ ನಮೋ ನಮೋ
ರಸವತ್ತಾದ ಪದಗಳ ನುಡಿಸಿದ
ವೀಣಾಪಾಣಿಗೆ ನಮೋ ನಮೋ
ತಿಮಿರವನಡಗಿಸಿ ಬೆಳಕನು
ನೀಡಿದ ಜ್ಞಾನದಾತೆಗೆ ನಮೋ ನಮೋ

***

Saturday, August 23, 2008

ಪ್ರಾರ್ಥನೆ ...



ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ
ಕಾವರಿಲ್ಲವು ನಿನ್ನ ಬಿಟ್ಟರೆ ದೇವನೆ ಜಗದೀಶನೆ
ಜೀವ ಕೋಟಿಯು ನಿನ್ನ ಈ ದಯದಿಂದ ಜೀವಿಪುದಲ್ಲವೇ . ಸ್ವಾಮಿ

ರಾತ್ರಿ ನಿದ್ರೆಯ ಗೈವ ಕಾಲದಿ ನೀನೆ ನಮ್ಮನು ಕಾಯ್ದೆಯೈ
ಸ್ತೋತ್ರ ಮಾಡುವ ಹಾಗೆ ನಿನ್ನನು ಪಕ್ಷಿಗಳು ಧ್ವನಿ ಗೈದುವೈ
ಮಿತ್ರನೆ೦ಬುವ ನಾಮಧೇಯವು ಸತ್ಯವಾದುದು ನಿನ್ನೊಳು
ಚಿತ್ರಭಾನುವೆ ನಿನ್ನ ನೋಡಿದದೆಲ್ಲಿ ಪೋದುದು ಕತ್ತಲೆ . ಸ್ವಾಮಿ
***

ಮೂಡುವನು ರವಿ ....

ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುವನು
ಮೂಡಣ ರಂಗಸ್ಥಳದಲಿ ನೆತ್ತರ
ಮಾಡುವನು ಕುಣಿದಾಡುವನು

ಬೆಳಕಿನ ಕಣ್ಣುಗಳಿ೦ದಾ ಸೂರ್ಯನು
ನೋಡುವನು ಬಿಸಿಲೂಡುವನು
ಚಿಲಿಪಿಲಿ ಹಾಡನು ಹಾಡಿಸಿ ಹಕ್ಕಿಯ
ಗೂಡಿನ ಹೊರ ಹೊರ ದೂಡುವನು

ಬಂಗಾರದ ಚೆಲು ಬಿಸಿಲ ಕಿರೀಟದ
ಶೃಂಗಾರದ ತಲೆ ಎತ್ತುವನು
ತೆಂಗಿನ ಕಂಗಿನ ತಾಳೆಯ ಬಾಳೆಯ
ಅಂಗಕೆ ರಂಗನು ಮೆತ್ತುವನು
ಮಾಡಿನ ಹುಲ್ಲಲಿ ಚಿನ್ನದ ಗೆರೆಯನು
ಎಳೆಯುವನು ರವಿ ಹೊಳೆಯುವನು
ಕೂಡಲ ಕೋಣೆಯ ಕತ್ತಲೆ ಕೊಳೆಯನು
ತೊಳೆಯುವನು ರವಿ ಹೊಳೆಯುವನು

ಮಲಗಿದ ಕೂಸಿನ ನಿದ್ದೆಯ ಕಸವನು
ಗುಡಿಸುವನು ಕಣ್ ಬಿಡಿಸುವನು
ಹುಲುಗಿಡ ಹೂವಿಗೆ ಪರಿ ಪರಿ ಬಣ್ಣವ
ತೊಡಿಸುವನು ಹನಿ ತೊಡೆಸುವನು

ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಬೇಕೆಲೆ
ಎಂಬಾ ಮಾತನು ಸಾರುವನು
(ಕವಿ : ಪಂಜೆ ಮಂಗೇಶ ರಾಯರು )
***

Friday, August 22, 2008

ಅಳಿಲು


ಅಳಿಲೇ ಅಳಿಲೇ ಚಿಂವ್ ಚಿಂವ್ ಅಳಿಲೇ
ಮರದಿಂದಿಳಿದು ಬಾ ಬಾ ನಲಿದು

ಸಕ್ಕರೆ ಬೆಲ್ಲ ಚಕ್ಕುಲಿ ಎಲ್ಲ

ಬಂದರೆ ಕೊಡುವೆ ಬರದಿರೆ ತಿನುವೆ

ಬಾರೋ ಬೇಗ ಹಾಕೋ ಲಾಗ

ಅಳಿಲೇ ಅಳಿಲೇ ಚಿಂವ್ ಚಿಂವ್ ಅಳಿಲೇ

***

ಬಾವುಟ...


ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟ ಪಟ
ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು
ಇಂಥ ಧ್ವಜವು ನಮ್ಮ ಧ್ವಜವು ನೋಡು ಹಾರುತಿರುವುದು
ಧ್ವಜದ ಭಕ್ತಿ ನಮ್ಮ ಶಕ್ತಿ ನಾಡಗುಡಿಯ ಮೆರೆವುದು
ಕೆಂಪು ಕಿರಣ ತುಂಬಿ ಗಗನ ಹೊನ್ನ ಬಣ್ಣವಾಗಿದೆ
ನಮ್ಮ ನಾಡಗುಡಿಯ ನೋಡ ನೋಡಿರಣ್ಣ ಹೇಗಿದೆ ?

***

Thursday, August 21, 2008

ಮೊಲದ ಮರಿ ......

ಮೊಲದ ಮರಿ ಮೊಲದ ಮರಿ ಆಡ ಬಾರೆ
ಚುಪಕೆ ಚುಪಕೆ ಚುಪಕೆ ಚುಪಕೆ ನೆಗೆದು ಬಾರೆ
ದೊಡ್ಡದಾದ ಕಾಡಿನೊಳಗೆ ನಿನ್ನ ಠಾವೆ
ಹೆಡ್ಡ ನೀನು ಪೊದರಿನೊಳಗೆ ವಾಸಿಸುವೆ
ಪೊದರಿನಿಂದ ಪೊದರ ಬಳಿಗೆ ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ ಸೊಗಸಿನೂಟ
ಗಿಡ್ಡ ಬಾಲ ದೊಡ್ಡ ಕಿವಿಯು ನಿನಗೆ ಚಂದ
ಎದ್ದು ಎನ್ನ ಬಳಿಗೆ ಬಂದು ಆಡೋ ಕಂದಾ
ಗೂಡು ಕಟ್ಟಿ ತಿಂಡಿ ಕೊಡುವೆ ಪ್ರೀತಿಯಿಂದಾ
ಕಾಡ ಬಿಟ್ಟು ಗೂಡು ಸೇರೋ ಮೊಲದ ಕಂದಾ
ಮುದ್ದು ಮುದ್ದು ಮಾತುಗಳನು ನಿನಗೆ ಕಲಿಸುವೆ
ಮುದ್ದು ಮಾಡಿ ಪ್ರೀತಿಯಿಂದ ನಿನ್ನ ಸಲಹುವೆ
ಮೊಲದ ಮರಿ ಮೊಲದ ಮರಿ ಆಡ ಬಾರೆ
ಚುಪಕೆ ಚುಪಕೆ ಚುಪಕೆ ಚುಪಕೆ ನೆಗೆದು ಬಾರೆ
(ಕವಿ : ಕೆಮ್ತೂರು ದೊಡ್ಡಣ್ಣ ಶೆಟ್ಟಿ )
****

ನಮ್ಮ ಪಾಪು ..


ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳಲು ಹೋದರದಕೆ ಕೋಪ ಬರುವುದು
ಕೋಪ ಬರಲು ಗಟ್ಟಿಯಾಗಿ ಕಿರುಚಿಕೊಳುವುದು
ಕಿರುಚಿಕೊಂಡು ತನ್ನ ಮೈಯ್ಯ ಪರಚಿಕೊಳುವುದು
ಮೈಯ್ಯ ಪರಚಿಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿ೦ದ ಸಣ್ಣ ಮುತ್ತು ಸುರಿವುದು
ಪಾಪ ಅತ್ತರಮ್ಮ ತಾನು ಅತ್ತು ಬಿಡುವಳು
ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು
ಪಾಪ ಪಟ್ಟು ಹಿಡಿದ ಹಠವು ಸಾರ್ಥವಾಯಿತು
ಕಿರುಚಿ ಪರಚಿ ಅಳುವುದೆಲ್ಲ ಅರ್ಥವಾಯಿತು !!
(ಕವಿ : ಜೆ . ಪಿ. ರಾಜರತ್ನಂ )
***

Wednesday, August 20, 2008

ಮಕ್ಕಳ ಮೇಳ

ಮಕ್ಕಳ ಮೇಳ
ಮಕ್ಕಳ ಮೇಳ ಮದ್ದಲೆ ತಾಳ
ಚೆಂಡೆಯ ಬಡಿತ ಮಕ್ಕಳ ಕುಣಿತ
ಕೇಳಿಯ ಹೊಡೆದು ಜನರನು ಕರೆದು
ಬಣ್ಣದ ಮನೆಯಲಿ ಗಣಪತಿ ಪೂಜೆ
ಬಾಲಗೊಪಾಲರ ಸುಂದರ ವೇಷ
ಮೇಳದ ದೇವರ ಜೊತೆಗೆ ಪ್ರವೇಶ
ಸ್ಥ್ರೀವೇಶದ ಜತೆ ನಗೆಯವ ಬಂದ
ಥೈ ಧಿನ ಥಕಧಿನ ಕುಣಿಯುವ ಚಂದ
ಇಂದ್ರನ ಓಲಗ ದೂತನ ಲಾಗ
ಬಣ್ಣದ ವೇಷ ಬಲು ಸಂತೋಷ
ತಟ್ಟೆ ಕಿರೀಟದ ಆರ್ಭಟೆ ಕೇಳಿ
ರಕ್ಕಸ ರಾಜನು ಬರುವನು ತಾಳಿ
ದೀವಟಿ ಕೈಯಲಿ ಹಿಡಿಯುತ ಬಂದ
ರಾಳದ ಹುಡಿಯನು ಹಾರಿಸಿ ನಿಂದ
ಮುಗಿಲಿನ ತನಕ ಬೆಂಕಿಯ ಜ್ವಾಲೆ
ಸ್ವರ್ಗಕೆ ಧಾಳಿ ಸೇನೆಯು ಧೂಳಿ
ರಕ್ಕಸರಾಜಗೆ ಪರಾಕು ಹೇಳಿ
ಇಂದ್ರನ ಮೊರೆಯನು ಕೇಳುತ ಬಂದ
ಹಾಲುಗಡಲಿನ ಬಾಲ ಮುಕುಂದ
ಇಂದ್ರಗೆ ಅಭಯ ಇನ್ನಿಲ್ಲ ಭಯ
ದೈತ್ಯನ ತರಿದ ಪೌರುಷ ಮೆರೆದ
ಖಳ ಸಂಹಾರಿ ದಿವಿಜೋಧ್ಧಾರಿ
ಬೆಳಗಿನ ಜಾವ ಮೋಹನ ರಾಗ
ಮಂಗಳದಾರತಿ ಬೆಳಗುವ ಹೊತ್ತು
ಚೌಕಿಯ ಒಳಗಡೆ ಎಲ್ಲರು ನಿತ್ತು.
(ಕವಿ : ಎಸ್ .ಗೋಪಾಲಕೃಷ್ಣ ಶಗ್ರಿತ್ತಾಯ )

***

ಲಾಲಾಜಿ ..

ಲಾಲಾಜಿ ಲಾಲಾಜಿ ಲಡ್ಡು ಕೊಡು
ಲಡ್ಡು ಬೇಕೆಂದರೆ ದುಡ್ಡು ಕೊಡು

ಲಾಲಾಜಿ ಲಾಲಾಜಿ ನಿನ್ನ ಮೀಸೆ
ಎಷ್ಟು ಅಂದ ಎಷ್ಟು ಚಂದ

ಮುದ್ದು ಮರಿ ಮುದ್ದು ಮರಿ ಬಾರೋ ಇಲ್ಲಿ
ಎಷ್ಟು ಲಡ್ಡು ಬೇಕೋ ಅಷ್ಟು ತಗೋ !
***

Tuesday, August 19, 2008

ಅನ್ನದಾತ


ಇವನೆ ನೋಡು ಅನ್ನದಾತ
ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು
ದವಸ ಧಾನ್ಯ ಬೆಳೆವನು

ಮಳೆಯ ಗುಡುಗು ಚಳಿಯ ನಡುಗು
ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ
ಒಂದೇ ಸವನೆ ದುಡಿಯುತ

ಗಟ್ಟಿ ದೇಹ ದೊಡ್ಡ ಮನಸು
ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ
ಅನ್ನ ನೀಡುತಿರುವನು
ಎತ್ತು ಎರಡು ಅವನ ಜೋಡು
ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೇ ಇರಲಿ
ಹೊಂದಿಕೊಂಡು ನಡೆವರು
(ಕವಿ : ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ)
***

ನವನೀತದ ಕುರಿತು ....


ಬಾಲ್ಯದಲ್ಲಿ ಅಮ್ಮ ಹೇಳಿಕೊಟ್ಟದ್ದು , ಶಾಲೆಯಲ್ಲಿ ಕಲಿತದ್ದು, ಪತ್ರಿಕೆಯಲ್ಲಿ ಬಂದದ್ದು, ನೀತಿ ಪದಗಳು,ಮನಸ್ಸಿಗೆ ಮುದ ನೀಡುವ ಹಲವು ಶಿಶುಗೀತೆಗಳು ಎಲ್ಲವನ್ನು ಒಂದೆಡೆ ಸಂಗ್ರಹಿಸಿ ಆಸಕ್ತರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ನವನೀತವನ್ನು ಆರಂಭಿಸಿದ್ದೇನೆ .

ಓದಿ ಅನಂದಿಸೋಣವೇ ?