Monday, December 14, 2009

ಕನ್ನಡ ನಾಡು



ಚಿನ್ನದ ನಾಡು ಗಂಧದ ಬೀಡು
ಜೇನಿನ ಗೂಡಿದು ಕನ್ನಡವು
ಸುಂದರ ವನಗಳ ಚೆಂದದ ಹೊಲಗಳ
ಚೆಲುವಿನ ನಾಡಿದು ಕನ್ನಡವು

ಜುಳು ಜುಳು ಹರಿಯುವ ತೊರೆಗಳ ಕಲರವ
ಮೊರೆಯುವ ನಾಡಿದು ಕನ್ನಡವು
ತೆಂಗು ಕಂಗು ಬಾಳೆ ತಾಳೆಗಳ
ತೋಟದ ಸೊಬಗಿನ ಕನ್ನಡವು

ನವಿಲಿನ ನರ್ತನ ಕೋಗಿಲೆ ಕೂಜನ
ಶುಕಧ್ವನಿ ಮೊಳಗಿದ ಕನ್ನಡವು
ಕಪಿಗಳ ದಂಡು ಆನೆಯ ಹಿಂಡು
ಖಗ ಮೃಗ ತಳಕಿನ ಕನ್ನಡವು

ರಾಜಾಧಿರಾಜರು ಆಳಿದ ನಾಡು
ವೈಭವ ಮೆರೆದಿಹ ಕನ್ನಡವು
ಕವಿ ಪುಂಗವರು ಬಾಳಿದ ನಾಡು
ಸಾಹಿತ್ಯ ಸ್ಪೂರ್ತಿಯ ಕನ್ನಡವು

ಸಂಸ್ಕೃತಿ ಕಲೆಗಳು ತುಳುಕಿದ ನಾಡು
ಸುಖ ಶಾಂತಿ ನೆಲೆಸಿದ ಕನ್ನಡವು
ಶರಣರು ಸಂತರು ಬದುಕಿದ ನಾಡು
ಪುಣ್ಯ ಭೂಮಿಯಿದು ಕನ್ನಡವು
-ಆರ್. ಎಸ . ಚಾಪಗಾವಿ

Tuesday, December 8, 2009

ಬಾಲನ ಕರೆ ....


ಮೂಡಿದ ರವಿಯು
ಮುಳುಗುವ ಸಮಯಕೆ
ಗೂಡನು ಸೇರುವ ಹಕ್ಕಿಗಳೇ

ದಿನವಿಡೀ ಕಾಡಲಿ
ನಾಡಲಿ ಹಾರುತ
ಕಾಳನು ಅರಸುವ ಹಕ್ಕಿಗಳೇ

ವಿಧ ವಿಧ ಬಣ್ಣದಿ
ಮಧುರ ಸ್ವರದಲಿ
ಚಿಲಿ ಪಿಲಿಗುಟ್ಟುವ ಹಕ್ಕಿಗಳೇ

ಸಂಜೆಯ ಹೊತ್ತಲಿ
ನಿಮ್ಮೊಡನಾಡಲು
ಬರುತಿಹೆ ನಾನು ಹಕ್ಕಿಗಳೇ
***

Friday, December 4, 2009

ಸೂರ್ಯನಿಗೆ ನಮನ



ಸಹಸ್ರ ರಶ್ಮಿಯನು ಬೀರುವ
ಜಗದ ಕರ್ಮದ ಸಾಕ್ಷಿಯೇ
ತೇಜೋಮಯ ಪ್ರದೀಪ ನಿನ್ನಯ
ಚರಣಕನುದಿನ ನಮಿಸುವೆ


ಪುಂಜ ಪುಂಜದಿ ಬೆಳಕನೀಯುತ
ಮೂಡು ದಿಕ್ಕಲಿ ಮೂಡುವೆ
ಮತ್ತೆ ಏರುತ ಪ್ರಖರನಾಗುತ
ಭೂಮಿಯನ್ನು ಬೆಳಗುವೆ


ಹೊನ್ನ ಬಣ್ಣದ ಕಿರಣವೀಯು
ಮೋಡದೆಡೆಯಲಿ ಅಡಗುವೆ
ಮತ್ತೆ ಸಂಜೆಯ ತಂಪು ಕಂಪಲಿ
ಶರಧಿಯಾಚೆಗೆ ಇಳಿಯುವೆ


ಸಸ್ಯ ಪ್ರಾಣಿ ಸಂಕುಲವನೆಲ್ಲವ
ಕಾಲ ಕಾಲಕೆ ಬೆಳೆಸುವೆ
ಜಗದ ಜೀವಕೆ ಆರೋಗ್ಯ ಭಾಗ್ಯವ
ಕೊಡುವ ನಿನಗೆ ನಮಿಸುವೆ .

**