Friday, December 26, 2008

ಗೋಮ್ಮಟೇಶ


ಬೆಟ್ಟದ ಮೇಲೆ
ನೆಟ್ಟನೆ ನಿಂತಿಹ
ಗೊಮ್ಮಟೇಶನ ನೋಡಣ್ಣ

ಮಂದಹಾಸವ ಬೀರುತ
ನಿಂದಿಹ ಶಾಂತಿಯ
ಮೂರುತಿ ನೋಡಣ್ಣ

ದಿನ ದಿನ ಜನರು
ದರುಶನ ಮಾಡಲು
ಬರುವರಿಲ್ಲಿಗೆ ನೋಡಣ್ಣ

ಮಜ್ಜನ ಮಾಡುವ
ಸಮಯಕೆ ಎಲ್ಲರು
ಹಾಡುತ ನಲಿವರು ನೋಡಣ್ಣ .
(ಕವಿ : ಸುಬ್ರಹ್ಮಣ್ಯ ಭಟ್)
***

ಮಂಗಣ್ಣ


ಮರದಿಂದ ಮರಕೆ
ಹಾರುತ ಬರುವ
ಕೆಂಪನೆ ಮುಖದ ಮಂಗಣ್ಣ
ಸುಲಿದ ಬಾಳೆಯ
ಹಣ್ಣನು ಕೊಡುವೆ
ಬೇಗನೆ ನೀನು ನುಂಗಣ್ಣ

ಹಲ್ಲನು ಕಿರಿಯುತ
ಕಣ್ಣನು ಮಿಟುಕಿಸಿ
ಟಿರಿ ಟಿರಿಗುಟ್ಟುವುದೇಕಣ್ಣ

ಕಾಡಿನ ಮರದಲಿ
ಸಿಗುವ ಹಣ್ಣನು
ತಿನ್ನುತ ನೀನು ಬಾಳಣ್ಣ


***

Wednesday, December 24, 2008

ಸುಗ್ಗಿ ಸಂಭ್ರಮ



ಗದ್ದೆಯ ಬದಿಯ
ತೆಂಗಿನ ಮರದಲಿ
ಗೀಜಗನ ಗೂಡು
ಸೋರೆಯ ಬುರುಡೆ
ಕಟ್ಟಿದ ಹಾಗೆ
ಕಾಣುತಿದೆ ನೋಡು

ಗದ್ದೆಯ ನಡುವೆ
ಕೇಳಿ ಬರುತಿದೆ
ಸುಗ್ಗಿಯಾ ಹಾಡು

ಕೊಯ್ಲನು ಕೊಯ್ದು
ರೈತನ ಮನೆಯ
ಕಣಜವ ನೀ ನೋಡು

ಸುಗ್ಗಿಯು ಬರುತಿರೆ
ಹಿಗ್ಗುತ ಬೇಗನೆ
ಸಿಹಿಯೂಟವ ಮಾಡು

(ಕವಿ : ಸುಬ್ರಹ್ಮಣ್ಯ ಭಟ್ )
***

Tuesday, December 23, 2008

ದುಂಬಿ

ಹಾರುತ ಹಾರುತ
ಹತ್ತಿರ ಬಂದಿತು
ದುಂಬಿಯು ತಾನೊಂದು
ಹೂವಿನ ಮಧುವನು
ಹೀರಲಿಕೆಂದು ತವಕದಿ
ಬಳಿ ಬಂದು
ಅರಳಿದ ಹೂವಿನ
ರಸವನು ಹೀರುತ
ಮೆಲ್ಲನೆ ತಾ ಸವಿದು
ರೆಕ್ಕೆಯ ಬಡಿಯುತ
ಹಾರುತ ಹೋಯಿತು
ಗಗನದ ಕಡೆಗಂದು.
***

Thursday, December 18, 2008

ಗೊಂಬೆ

ಮರದಲಿ ಮಾಡಿದ ಚೆಲುವಿನ ಗೊಂಬೆ
ಕರಚಳಕದಿ ಕೊರೆ ಕೊರೆದಿಹ ಗೊಂಬೆ
ಗರ ಗರ ತಿರುಗುವ ಮಾಟದ ಗೊಂಬೆ
ಕಿರಿಯರು ಹಿರಿಯರು ಮೆಚ್ಚುವ ಗೊಂಬೆ
ಚಿನ್ನದ ಹಾಗೆ ಹೊಳೆಯುವ ಗೊಂಬೆ
ರನ್ನದ ಹಾಗೆ ಮಿನುಗುವ ಗೊಂಬೆ
ಕಣ್ಣನು ಮಿಟುಕಿಸಿ ಆಡುವ ಗೊಂಬೆ
ಪಿಂ ಪಿಂ ಪಿಂ ಪಿಂ ಎನ್ನುವ ಗೊಂಬೆ
ಕು೦ಯ ಕು೦ಯ ಕು೦ಯ ಕು೦ಯ ಎನ್ನುವ ಗೊಂಬೆ
ಕೊಳ್ಳಿರಿ ಮಕ್ಕಳು ಪೀಂ ಪೀಂ ಗೊಂಬೆ
ಕೊಳ್ಳಿರಿ ಕ್ಯುಮ್ ಕ್ಯುಮ್ ಎನ್ನುವ ಗೊಂಬೆ
ಬನ್ನಿರಿ ಬನ್ನಿರಿ ಮುಂದಕೆ ನುಗ್ಗಿ
ಚನ್ನಿಗ ಬಂದನು ಭರದಿಂ ನುಗ್ಗಿ
ಕಂದನಿಗೆನ್ನುತ ನೋಡಿದ ಬಾಗಿ
ಗೊಂಬೆಯ ಕೊಂಡನು ಹರ್ಷಿತನಾಗಿ
(ಕವಿ: ಶಾ೦ತಿರಾಂ )
***

Friday, December 12, 2008

ಪದ್ದು

ಅವಳ ಹೆಸರು ಪದ್ದು
ಬುದ್ಧಿಯಿಲ್ಲ ಪೆದ್ದು
ಮನೆಯಲೆಲ್ಲ ಮುದ್ದು
ತಿನ್ನೋದೆಲ್ಲ ಕದ್ದು
ಒಮ್ಮೆ ಸಿಕ್ಕಿ ಬಿದ್ದು
ಬಿತ್ತು ನಾಲ್ಕು ಗುದ್ದು !

***

Thursday, December 11, 2008

ಗುಂಡ

ಉಂಡಾಡಿ ಗುಂಡ
ಮದುವೆ ಮನೆಗೆ ಹೋದ
ಹತ್ತು ಲಾಡು ತಿಂದ
ಹೊಟ್ಟೆ ನೋವು ಅಂದ
ಅಮ್ಮ ಬೆಣ್ಣೆ ಕೊಟ್ಟಳು
ಇನ್ನು ಬೇಕು ಅಂದ
ಅಪ್ಪ ದೊಣ್ಣೆ ತಂದನು
ಕೈ ಕಟ್ ಬಾಯಿ ಮುಚ್ !
***

ಊರ ಜಾತ್ರೆ


ಊರಿನ ತೇರನು
ನೋಡಲಿಕೆ೦ದು
ಜನರೆಲ್ಲರು ಬಂದು

ದೇವರ ಉತ್ಸವ
ಬಲಿಯನು ನೋಡಲು
ಮೌನದಿ ತಾ ನಿಂದು

ಡೋಲು ಗಂಟೆಯು
ವಾದ್ಯವು ಕಹಳೆಯು
ಸದ್ದನು ಮಾಡಿರಲು

ಮಲ್ಲಿಗೆ ಸಂಪಿಗೆ
ಬಗೆ ಬಗೆ ಹೂಗಳ
ಪರಿಮಳ ತುಂಬಿರಲು


ಚೆಂಡೆಯ ಬಡಿದು
ಪಟಾಕಿ ಸಿಡಿದು
ಸಡಗರದಿಂದಿರಲು

ದೇವರ ಹೊತ್ತು
ಬಲಿಯನು ಬರುತಿರೆ
ಭಕ್ತರು ಜಯವೆಂದು

ದೇವರ ರಥದಲಿ
ಕೂರಿಸಿ ತೇರನು
ಎಳೆಯುತ ನಡೆತಂದು

ಹರಿಯುವ ನದಿಯ
ಬದಿಯಲಿ ನಿಲ್ಲಿಸಿ
ಪೂಜೆಯ ಕೈಗೊಂಡು

ದೇವರು ಸ್ನಾನವ
ವಿರಚಿಸೆ ಜಾತ್ರೆಯು
ಕೊನೆಯಾಯಿತು ಅಂದು .

(ಕವಿ :ಸುಬ್ರಹ್ಮಣ್ಯ ಭಟ್ )

***

Wednesday, December 10, 2008

ಪುಟಾಣಿ ಅಳಿಲು


ಅಳಿಲೆ ಅಳಿಲೆ
ಪುಟಾಣಿ ಅಳಿಲೆ
ಹತ್ತಿರ ಬಾರಿಲ್ಲಿ


ಚಿಂವ್ ಚಿಂವ್ ಎನ್ನುತ
ಬಾಲವ ಕುಣಿಸಿ
ಹೊರಟಿಹೆ ನೀನೆಲ್ಲಿ ?


ಹಣ್ಣನು ಕೊಡುವೆ
ಹಾಲನು ನೀಡುವೆ
ಬೇಗನೆ ಬಾರಿಲ್ಲಿ


ಬಾನಲಿ ಕಟ್ಟಿದ
ಕಾಮನ ಬಿಲ್ಲನು
ತೋರುವೆ ನೋಡಲ್ಲಿ


ಪುಟಾಣಿ ಅಳಿಲೆ
ನೀನು ಬಂದರೆ
ಆಡುವ ನಾವಿಲ್ಲಿ


ಅಮ್ಮನು ಕೊಟ್ಟಿಹ
ತಿಂಡಿಯನೆಲ್ಲವ
ಕೊಡುವೆನು ನಿನಗಿಲ್ಲಿ


ನಾನೂ ನೀನೂ
ಕೂಡುತಲೀಗ
ಆಟವನಾಡೋಣ


ಅಮ್ಮನು ಕರೆಯೆ
ನಮ್ಮ ಮನೆಯನು
ಬೇಗನೆ ಸೇರೋಣ

(ಕವಿ : ಸುಬ್ರಹ್ಮಣ್ಯ ಭಟ್ )

***


Tuesday, December 9, 2008

ಮುದ್ದು ಕಂದ...

ಬಾನಿನಲ್ಲಿ ಸೂರ್ಯ ದೇವ
ಮೇಲಕೇರಿ ಬಂದ
ನಿದ್ದೆ ಕಳೆದು ಮೇಲಕೇಳು
ಬಾಲ ಮುದ್ದು ಕಂದ
ಹಕ್ಕಿಗಳ ಇಂಚರವು ಸವಿಯೆ
ಕಿವಿಗೆ ಅಂದ
ಮಂಜಿನ ಹನಿಗಳೆಲ್ಲ
ಹುಲ್ಲ ಮೇಲೆ ಚೆಂದ
ಬೇಗನೆದ್ದು ಮುಖವ ತೊಳೆಯೋ
ಬಾಲ ಮುದ್ದು ಕಂದ
ನಿನ್ನ ಆಟ ಪಾಠವೀಗ
ಮಾಡಬೇಕು ಬೇಗ
ನಿದ್ದೆ ಕಳೆದು ಮೇಲಕೇಳು
ಬಾಲ ಮುದ್ದು ಕಂದ
(ಕವಿ : ಸುಬ್ರಹ್ಮಣ್ಯ ಭಟ್ )
***

Friday, December 5, 2008

ಗಿರಿಗಿಟ್ಟಿ

ಗಿರ ಗಿರ ತಿರುಗುವ ಗಿರಿಗಿಟ್ಟಿ
ಸುರಗಿ ಎಲೆಯ ಗಿರಿಗಿಟ್ಟಿ

ಕಡ್ಡಿಗೆ ಪೋಣಿಸಿ
ಕೈಯಲಿ ಹಿಡಿದು

ಗಾಳಿಗೆ ತಿರುಗುವ ಗಿರಿಗಿಟ್ಟಿ
ಗಿರ ಗಿರ ತಿರುಗುವ ಗಿರಿಗಿಟ್ಟಿ
***

Thursday, December 4, 2008

ಲಗೋರಿ


ಲಗೋರಿ ಆಟವ ಆಡಲು ಬನ್ನಿರಿ
ಗೆಳೆಯರೆ ನೀವೆಲ್ಲ
ಗುಂಪುಗಳೆರಡನು ಮಾಡುತ
ನಾವು ಆಡುವ ಈಗೆಲ್ಲ

ಕಲ್ಲುಗಳೇಳನು ಬೇಗನೆ
ಇರಿಸುತ ಒಂದರಮೇಲೊಂದು
ಗೋರಿಯ ಕಟ್ಟಲು ಚೌಕದೊಳಗೆ
ಆಟವು ಸುರುವಂದು

ಚೆಂಡನು ಹಿಡಿದು ಗುರಿಯನು ಕೆಡೆದು
ಓಡುತ ನಾವಿಂದು
ಜಾಣರಂತೆ ಗೋರಿಯ ಕಟ್ಟಲು
ತಪ್ಪಿಸಿಯಾ ಚೆಂಡು

ಆಟವು ಮುಗಿದುದು ಗೋರಿಯ ಕಟ್ಟಲು
ಲಗೋರಿ ಎಂದೆನುತ
ಹಾರುತ ಆಡುವ ಬನ್ನಿರಿ
ಗೆಳೆಯರೆ ನಾವೀಗಲೆ ಕಲೆತು
(ಕವಿ : ಸುಬ್ರಹ್ಮಣ್ಯ ಭಟ್ )

***

Wednesday, December 3, 2008

ಕಳ್ಳ ಬೆಕ್ಕು


ಮಿಯಾಂವ್ ಮಿಯಾಂವ್ ಮಿಯಾಂವ್
ಎಂದು ಬೆಕ್ಕು ಬಂದಿತು

ಕಳ್ಳ ಹೆಜ್ಜೆ ಇಟ್ಟು
ಅಡುಗೆ ಮನೆಯ ಹೊಕ್ಕಿತು

ಹಾಲ ಪಾತ್ರೆ ಮುಚ್ಚಳನ್ನು
ಕೊಡವಿ ಹಾಕಿತು

ಪಾತ್ರೆಯೊಳಗೆ ತಲೆಯ ಹಾಕಿ
ನೆಕ್ಕ ತೊಡಗಿತು

ಇದನು ತಿಳಿದ ಅಮ್ಮ
ಮೆಲ್ಲ ಕೋಲು ತಂದಳು

ದೂರದಿಂದ ತಿರುಗಿ ನೋಡಿ
ಬೆಕ್ಕು ಓಡಿತು !
(ಕವಿ : ಸುಬ್ರಹ್ಮಣ್ಯ ಭಟ್ )
***

Tuesday, December 2, 2008

ಮಿಂಚುಳ್ಳಿ


ಮಾವಿನ ಮರದ ಟೊ೦ಗೆಯಲಿ
ಮಿಂಚುಳ್ಳಿ ಕುಳಿತಿತ್ತು
ಅತ್ತ ಇತ್ತ ಕೊಂಕಿಸಿ ಕೊರಳ
ಕೆರೆಯನು ನೋಡಿತ್ತು
ಮೇಲಿಂದ ನೀರಿನೊಳಗೆ
ಒಮ್ಮೆಲೇ ಹಾರಿತ್ತು
ಮೇಲಕೆ ಬರುತ ಬಾಯೊಳು
ಒಂದು ಮೀನನು ಕಚ್ಚಿತ್ತು
ಹಾರುತ ಹೋಗಿ ತನ್ನಯ
ಮರಿಗೆ ಗುಟುಕನು ಕೊಟ್ಟಿತ್ತು
ಮೀನನು ತಿಂದು ಮರಿ ಮಿಂಚುಳ್ಳಿ
ಚೀಂವ್ ಚೀಂವ್ ಎಂದಿತ್ತು
(ಕವಿ : ಸುಬ್ರಹ್ಮಣ್ಯ ಭಟ್ )
***

Monday, December 1, 2008

ಚಿಟ್ಟೆ


ಬಣ್ಣದ ಚಿಟ್ಟೆ
ಬಣ್ಣದ ಚಿಟ್ಟೆ
ಬೇಗನೆ ಬಾರಿಲ್ಲಿ


ತರತರ ಬಣ್ಣದ
ಚಿತ್ರವ ನಿನ್ನಲಿ
ಬರೆದವರೀಗೆಲ್ಲಿ ?


ಹೂವಿನ ಎಸಳಲಿ
ಮೊಗ್ಗಿನ ಬದಿಯಲಿ
ಮೆಲ್ಲನೆ ನೀ ಕುಳಿತು


ಹಾರುತ ಹಾರುತ
ಮೇಲಕೆ ಹೋಗುವೆ
ರೆಕ್ಕೆಯ ನೀ ಬಡಿದು


ಬಾ ಬಾ ಚಿಟ್ಟೆ
ನಿನ್ನನು ಮುಟ್ಟಿ
ಅಮ್ಮಗೆ ತೋರುವೆನು


ಕೈಯಲಿ ಮೆತ್ತಿದ
ಬಣ್ಣವ ಕಂಡು
ಪುಳಕವಗೊಳ್ಳುವೆನು !

(ಕವಿ : ಸುಬ್ರಹ್ಮಣ್ಯ ಭಟ್ )

***