Friday, January 16, 2009

ನಾಯಿ ಮರಿ

ತೋಟದ ಮನೆಯ
ಪಕ್ಕದ ಗೂಡಲಿ
ನಾಯಿ ಮರಿ ಕುಳಿತಿತ್ತು
ಹಾರುತ ಬಂದ
ಮಂಗನ ನೋಡಿ
ಕುಂಯ್ ಕುಂಯ್ ಅಂದಿತ್ತು
ಅಮ್ಮ ನಾಯಿಯು
ಇದನು ಕಂಡು
ಓಡುತ ಬಂದಿತ್ತು
ಮರದ ಮೇಲಿನ
ಮಂಗನ ಕಂಡು
ಬೌ ಬೌ ಬೊಗಳಿತ್ತು
ನಾಯಿಯ ಕಂಡು
ಮಂಗನು ಬೇಗನೆ
ಓಡಲು ತೊಡಗಿತ್ತು
ಅಮ್ಮ ನಾಯಿಯು
ಮರಿಯನು ನೆಕ್ಕುತ
ಮುದ್ದು ಮಾಡಿತ್ತು .
***

Wednesday, January 14, 2009

ಮಾವಿನ ಮರರುಚಿ ರುಚಿ ಮಾವಿನ
ಹಣ್ಣನು ಕೊಡುವ
ಮಾವಿನ ಮರವೇ ಅಂದ


ತಣ್ಣನೆ ನೆರಳನು
ನೀಡುವ ಮರದ
ಚಿಗುರೆಲೆ ನೋಡಲು ಚ೦ದ


ತಳಿರಿನ ನಡುವೆ
ಮರಿ ಕೋಗಿಲೆಯು
ಹಾಡನು ಹಾಡಲು ಅಂದ


ಬೀಸುವ ಗಾಳಿಗೆ
ಬೀಳುವ ಹಣ್ಣನು
ಹೆಕ್ಕುತ ಸವಿಯಲು ಆನಂದ !


***


Thursday, January 8, 2009

ಸಂಕ್ರಾಂತಿ ಹಬ್ಬಹಬ್ಬವೇ ಹಬ್ಬವು
ಸಂಕ್ರಾಂತಿ ಹಬ್ಬವು
ಬರುತಿದೆ ನೋಡಣ್ಣ

ಎಳ್ಳು ಬೆಲ್ಲ ಸೇವಿಸಿ
ನಾವು ಹಾಡುತ
ನಲಿಯುವ ಬಾರಣ್ಣ

ಸಂಕ್ರಾಂತಿ ಹೂವಿನ
ದಂಡೆಯ ಹಿಡಿದು
ಆಟವನಾಡೋಣ

ಬೆಟ್ಟದ ಮೇಲಿನ
ಗಣಪನ ಗುಡಿಗೆ
ಓಡುತ ಹೋಗೋಣ

ಭಟ್ಟರು ಕೊಡುವ
ಅಪ್ಪ ಮೋದಕವ
ಸವಿಯನು ಸವಿಯೋಣ

ಹಬ್ಬವೇ ಹಬ್ಬವು
ಸಂಕ್ರಾಂತಿ ಹಬ್ಬವು
ಬರುತಿದೆ ನೋಡಣ್ಣ
***

Wednesday, January 7, 2009

ನದಿ ಸ್ನಾನ

ಪಲ್ಗುಣಿ ನದಿಯ
ತೀರಕೆ ಹೋಗಿ
ಆಟವನಾಡೋಣ
ಮರಳಿನ ದಿಣ್ಣೆಯ
ಮನೆಯನು ಕಟ್ಟಲು
ಎಲ್ಲರು ಸೇರೋಣ
ದುಂಡಗಿನ ಕಲ್ಲನು
ಆರಿಸಿ ರಾಶಿಯ
ಮಾಡೋಣ
ಸುಣ್ಣದ ಕಲ್ಲಿನ
ಚಿಪ್ಪನು ಹೆಕ್ಕುತ
ಲೆಕ್ಕವ ಹಾಕೋಣ
ನೀರಲಿ ಇಳಿದು
ಎಲ್ಲರು ನಾವು
ಬೇಗನೆ ಈಜೋಣ
ಸ್ನಾನವ ಮಾಡಿ
ಆಟವನಾಡಿ
ಮನೆಯನು ಸೇರೋಣ
***

Tuesday, January 6, 2009

ಏಳುವ ಸಮಯ

ಬಾನಲಿ ರವಿಯು

ಮೂಡುವ ಸಮಯ

ಭಟ್ಟರು ಪೂಜೆಯ
ಮಾಡುವ ಸಮಯ


ಶೆಟ್ಟರು ಅಂಗಡಿ
ತೆರೆಯುವ ಸಮಯ


ಅಮ್ಮನು ರಂಗೋಲಿ
ಹಾಕುವ ಸಮಯ


ಅಕ್ಕನು ನೀರನು
ತರುವ ಸಮಯ


ಹೂವಿನ ಪರಿಮಳ
ಬೀರುವ ಸಮಯ


ಹಾರುವ ಹಕ್ಕಿಯು
ಉಲಿಯುವ ಸಮಯ


ನಾನು ನಿತ್ಯವೂ
ಏಳುವ ಸಮಯ !
***

Monday, January 5, 2009

ಮೊಲದ ಮರಿಹಾರುತ ಜಿಗಿಯುತ
ಹತ್ತಿರ ಬಂದಿತು
ಮೊಲದ ಮರಿಯೊಂದು


ಚಿಗುರೆಲೆ ಹುಲ್ಲನು
ಸವಿಯುತ ನಿಂತಿತು
ಮುದ್ದಿನ ಮರಿಯಂದು


ಇದನು ಕಂಡ
ನಾಯಿಯ ಮರಿಯು
ಬೊಗಳಿತು ಬೌ ಎಂದು


ಕಿವಿಯನು ನಿಮಿರಿಸಿ
ಪೊದರಿನೊಳಡಗಿತು
ಮೊಲದ ಮರಿಯಂದು !
***

Sunday, January 4, 2009

ಗಿಳಿ ..


ಮಾವಿನ ಮರದ
ಚಿಗುರೆಲೆ ನಡುವೆ
ಕುಳಿತಿಹ ಗಿಳಿಯೇ
ಬಾ ಬಾ ಬಾ

ಕೆಂಪು ಮೂಗಿನ
ಮುದ್ದಿನ ಗಿಳಿಯೇ
ಹಾರುತ ಹತ್ತಿರ
ಬಾ ಬಾ ಬಾ

ಸೀಬೆಯ ಮರದ
ಹಣ್ಣನು ಕುಕ್ಕಿ
ತಿನ್ನುವ ಗಿಳಿಯೇ
ಬಾ ಬಾ ಬಾ

ಹಣ್ಣನು ಕೊಡುವೆ
ಹಾಲನು ನೀಡುವೆ
ಬೇಗನೆ ನೀನು
ಬಾ ಬಾ ಬಾ

ನಾನು ನೀನು
ಆಟವನಾಡುತ
ಸಮಯವ ಕಳೆಯೆ
ಬಾ ಬಾ ಬಾ
***