Friday, September 26, 2008

ಕಡಲು



ಕಡಲು ತೀರಕೆ ಹೋಗೋಣ

ಅಂದದ ಕಡಲನು ನೋಡೋಣ

ಅಲೆಗಳ ಆಟವ ನೋಡೋಣ

ಬಿಳಿ ಬಿಳಿ ನೊರೆಯಲಿ ಆಡೋಣ

ಮರಳಿನ ಮನೆಯನು ಕಟ್ಟೋಣ

ಈಜುವ ಮೀನನು ನೋಡೋಣ

ಕಪ್ಪೆ ಚಿಪ್ಪನು ಹುಡುಕೋಣ

ದೋಣಿಯ ಆಟವ ಆಡೋಣ !

***

Thursday, September 25, 2008

ಕೊಡೆ



ತಾತನು ಹಿಡಿಯುವ

ಬಿಳಿಯ ಕೊಡೆ

ಅಪ್ಪನು ಹಿಡಿಯುವ

ಕರಿಯ ಕೊಡೆ

ಅಕ್ಕನು ಹಿಡಿಯುವ

ಕೆಂಪು ಕೊಡೆ

ಬಣ್ಣದ ಹೂಗಳ

ನನ್ನ ಕೊಡೆ

ಬಿಸಿಲಲಿ ತಂಪನು

ಕೊಡುವ ಕೊಡೆ

ಮಳೆಯಲಿ ನಮ್ಮನು

ತೋಯಿಸದ ಕೊಡೆ

****

Wednesday, September 24, 2008

ನನ್ನ ಚೆಂಡು



ಚೆಂಡು ಚೆಂಡು ನನ್ನ ಚೆಂಡು
ಪುಟ ಪುಟ ಹಾರುವ ಬಣ್ಣದ ಚೆಂಡು

ರಂಗನು ಕೈಯಲಿ ಎಸೆಯುವ ಚೆಂಡು
ಸಂಗನು ಕೈಯಲಿ ತಟ್ಟುವ ಚೆಂಡು

ಅಣ್ಣನು ಕಾಲಲಿ ಒದೆಯುವ ಚೆಂಡು
ನನ್ನ ಕೈಯಲಿ ಚೆಂದದ ಚೆಂಡು

ಚೆಂಡು ಚೆಂಡು ನನ್ನ ಚೆಂಡು
ಪುಟ ಪುಟ ಹಾರುವ ಬಣ್ಣದ ಚೆಂಡು

***

Tuesday, September 23, 2008

ಅಜ್ಜನ ಹಾಡು



ಅಜ್ಜನು ಬಂದನು

ಮನೆಯೊಳಗೆ

ಗುನುಗುನುಗುಟ್ಟುತ

ಬಾಯೊಳಗೆ

ಪೆನ್ನನು ಹಿಡಿದನು

ಕೈಯೊಳಗೆ

ಹಾಡನು ಬರೆದನು

ಮಕ್ಕಳಿಗೆ !

ಎತ್ತಿನ ಬಂಡಿ



ಅಪ್ಪನು ನಡೆಸುವ ಎತ್ತಿನ ಬಂಡಿ

ಮರದಲಿ ಮಾಡಿದ ಚಂದದ ಬಂಡಿ

ಎಳೆಯಿತು ಅದನು ಎತ್ತಿನ ಜೋಡಿ

ಓಡಿತು ಗಡ ಗಡ ಸದ್ದನು ಮಾಡಿ

ಅಪ್ಪನು ಸಂತೆಗೆ ಹೋಗುವ ಬಂಡಿ

ಅಜ್ಜನು ಊರಿಗೆ ಹೋಗುವ ಬಂಡಿ

ನಮ್ಮ ಮನೆಯ ಚಂದದ ಬಂಡಿ

ಗಡ ಗಡ ಸದ್ದಿನ ಎತ್ತಿನ ಬಂಡಿ !

Monday, September 22, 2008

ಹಾಯಿಕುಗಳು

-1-
ಕತ್ತೆಯು ಎಂದಾದರೂ ನಿನ್ನನ್ನು ಒದ್ದರೆ
ಮರಳಿ ನೀನೊದೆಯದಿರದಕೆ
ಕತ್ತೆಯ ಒದೆಯನು ಹಿಂದಿರುಗಿಸಿದರೆ
ನೋವಿನ ಬಹು ಪಾಲು ನಿನಗೆ .

-2-
ಹತ್ತೆಡೆಯೊಳು ತೋಡಿ ಒಂದಡಿಯಷ್ಟನು
ಬರಲಿಲ್ಲ ನೀರೆನ್ನಬೇಡ
ಒಂದೆಡೆಯೊಳು ತೋಡು ಹತ್ತಡಿಯಷ್ಟನು
ಚಿಮ್ಮುವುದುದಕವು ನೋಡ !
-3-
ನದಿಗೆದುರೀಸುತ ಹೋಗುವುದಾದರೆ
ಜೀವಂತ ಮತ್ಸ್ಯವೆ ಬೇಕು
ಹೊನಲಿನ ದಿಕ್ಕಿಗೆ ಸಾಗುವುದಾದರೆ
ಕೊಳೆತೊಂದು ಕಸಕಡ್ಡಿ ಸಾಕು !
(ಕವಿ : ಕಡೆಂಗೋಡ್ಲು ಶಂಕರ ಭಟ್ )

***


ಬಾಲಕನೆ..





ಬಾನದೋ ಬೆಳಗಿತು ಕತ್ತಲೆಯೋಡಿತು


ಓ ಓ ಬಾಲಕನೆದ್ದೇಳು


ದಿನಮಣಿಯುದಿಸುತ ಮೇಲಕೆ ಬಂದನು


ಬೆಳಗಿನ ನಿದ್ದೆಯು ಬಲು ಹಾಳು



ದೂರದ ಹೊಲದಲಿ ನೇಗಿಲ ಯೋಗಿಯು


ದುಡಿಯುತಲಿರುವನು ಜನಕಾಗಿ


ಅಮ್ಮನು ದೇವರ ನಾಮವ ಸ್ಮರಿಸುತ


ಕದೆಯುತಲಿರುವಳು ಮೊಸರನ್ನು



ಆಲಸ್ಯವ ಬಿಡು ಚಾಪೆಯ ಮಡಚಿಡು


ಮೋರೆಯ ತೊಳೆವುದು ನೀನಿನ್ನು


ಈಶನ ಸ್ಮರಿಸುತ ಹಿರಿಯರ ನಮಿಸುತ


ಪಾಠಗಳೆಲ್ಲವನೋದುವುದು


ನಿತ್ಯವೂ ಮಿಂದು ಗಂಜಿಯನುಂಡು

ಸಮಯಕೆ ಶಾಲೆಗೆ ಹೋಗುವುದು

ಪುಸ್ತಕ ಸ್ಲೇಟು ಬೆಳ್ಳನೆ ಶರಟು

ಟೋಪಿಯನೇರಿಸುತನ್ದದಲಿ

ಬೀದಿಗಳಲ್ಲಿ ಬಲಬದಿಯಲ್ಲಿ

ನೆಟ್ಟನೆ ನಡೆವುದು ಶಿಸ್ತಿನಲಿ

ಆಟವ ಪಾಠವನೆಲ್ಲವನೋದಿ

ಜಾಣನಾಗು ಬಾಳಿನಲಿ

(ಕವಿ : ಸುಶೀಲಮ್ಮ ಎಂ. )

***

Saturday, September 20, 2008

ತಿರುಕನ ಕನಸು

ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ
ಪುರದ ರಾಜ ಸತ್ತರವಗೆ
ವರಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು
ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮ ನಾದೆನೆಂದು ಹಿಗ್ಗುತಿರ್ದನು
ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟನಿಗಳ ಕೂಡಿ ನಲ್ಲ
ನಿಷ್ಟ ಸುಖದೊಳಿರಲವನ್ಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ
ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ ಸುತರುಗಳಿಗೆ
ಬಾಲೆಯರನು ನೋಡಿ ಮಾಡುವೆ ಮಾಡಬೇಕೆಲೆ
ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ
ಗಾಢವಾಗೆ ಸಂಭ್ರಮಗಳು
ಮಾಡುತಿದ್ದ ಮದುವೆಗಳನು
ಕೂಡಿದಖಿಳ ರಾಜರೆಲ್ಲ ಮೆಚ್ಚುವಂದದಿ
ಧನದ ಮದವು ರಾಜ್ಯ ಮದವು
ತನುಜಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ಮುನಿದ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣುತಿರ್ದ ತಿರುಕ ಹೆದರಿ ಕಣ್ಣ ತೆರೆದನು !
ಮೆರೆಯುತಿದ್ದ ರಾಜ್ಯವೆಲ್ಲ
ಹರಿದು ಹೋಯಿತೆನುತ ತಿರುಕ
ಮರಳಿ ನಾಚಿ ಬೇಡುತಿದ್ದ
ಹಿಂದಿನಂತೆಯೇ
(ಕವಿ : ಮುಪ್ಪಿನ ಷಡಕ್ಷರಿ )
***

Thursday, September 18, 2008

ತುತ್ತೂರಿ



ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡನು ಕಸ್ತೂರಿ

ಸರಿಗಮ ಪದನಿಸ ಊದಿದನು

ಸನಿದಪ ಮಗರಿಸ ಊದಿದನು

ತನಗೇ ತುತ್ತೂರಿ ಇದೆಯೆಂದ
ಬೇರಾರಿಗೂ ಅದು ಇಲ್ಲೆಂದ
ಕಸ್ತೂರಿ ನಡೆದನು ಬೀದಿಯಲಿ
ಜಂಭದ ಕೋಳಿಯ ರೀತಿಯಲಿ
ತುತ್ತುರಿಯೂದುತ ಕೊಳದ ಬಳಿ
ನಡೆದನು ಕಸ್ತೂರಿ ಸಂಜೆಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು
ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಬಣ್ಣದ ತುತ್ತೂರಿ ಬೋಳಾಯ್ತು
ಬಣ್ಣದ ತುತ್ತೂರಿ ಹಾಳಾಯ್ತು
ಜಂಭದ ಕೋಳಿಗೆ ಗೋಳಾಯ್ತು
(ಕವಿ : ಜಿ.ಪಿ. ರಾಜರತ್ನಂ )
***

ಗಾಳಿಪಟ




ಅಣ್ಣನು ಮಾಡಿದ ಗಾಳಿಪಟ

ಬಣ್ಣದ ಹಾಳೆಯ ಗಾಳಿಪಟ

ನೀಲಿಯ ಬಾನಲಿ ತೇಲುವ

ಸುಂದರ ಬಾಲಂಗೋಚಿಯ ನನ್ನ ಪಟ




ಬಿದಿರಿನ ಕಡ್ಡಿಯ ಗಾಳಿಪಟ

ಬೆದರದ ಬೆಚ್ಚದ ಗಾಳಿಪಟ

ಉದ್ದದ ಬಾಲದ ಗಾಳಿಪಟ

ನನ್ನಯ ಮುದ್ದಿನ ಗಾಳಿಪಟ

***

Wednesday, September 17, 2008

ನಾನು ಯಾರು ?



ಚಿಕ್ ಚಿಕ್ ಚಿವ್ ಚಿವ್

ಎಂದುಕೊಂಡು ಮರಗಳಲ್ಲಿ

ಅತ್ತ ಇತ್ತ ಓಡುತಿರುವೆ

ನಾನು ಯಾರು ?

ಹಣ್ಣು ಕಾಯಿ ಬೀಜ ಗೊರಟು

ದವಸಧಾನ್ಯವೆಲ್ಲವನ್ನು

ತಿಂದುಕೊಂಡು ಹೊಟ್ಟೆ ಹೊರೆವೆ

ನಾನು ಯಾರು ?

ಮರದ ಚಿಕ್ಕ ಪೊಟರೆಯೊಳಗೆ

ಗೂಡು ಕಟ್ಟಿ ಮರಿಗಳೊಡನೆ

ವಾಸಮಾಡುತಿರುವೆನಣ್ಣ

ನಾನು ಯಾರು ?

ಉಣ್ಣೆಯಂತೆ ನುಣ್ಣಗಾದ

ರೋಮವಿರುವ ಬೆನ್ನ ಮೇಲೆ

ಬಿಳಿಯ ಮೂರು ಗೆರೆಗಳಿಹವು

ನಾನು ಯಾರು?

ಚಿಕ್ ಚಿಕ್ ಚಿವ್ ಚಿವ್

ಚಿಕ್ ಚಿಕ್ ಚಿವ್ ಚಿವ್

ಎನುವ ಪುಟ್ಟ ಹಾಡುಗಾರ

ನಾನು ಯಾರು ?

(ಕವಿ : ಪಳಕಳ ಸೀತಾರಾಮ ಭಟ್ )

***

Tuesday, September 16, 2008

ನನ್ನ ಕುದುರೆ


ಅಜ್ಜನ ಕೋಲಿದು ನನ್ನಯ ಕುದುರೆ
ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ
ಕಾಲಿಲ್ಲದೆಯೇ ನಡೆಯುವ ಕುದುರೆ
ಕೂಳಿಲ್ಲದೆಯೇ ಬದುಕುವ ಕುದುರೆ
ನಾಲನು ಬಡಿಸದ ಜೂಲವ ಹೊದಿಸದ
ಲಾಲನೆ ಪಾಲನೆ ಬಯಸದ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
ಚಂದಪ್ಪನಿಗೆ ಚಿಗರೆಯೇ ಕುದುರೆ
ಮಾದೇವನಿಗೆ ನಂದಿಯೇ ಕುದುರೆ
ರಾಮಚಂದ್ರನಿಗೆ ಹನುಮನೆ ಕುದುರೆ
ಹೊಟ್ಟೆಯ ಗಣಪಗೆ ಇಲಿಯೇ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
ನಿಂತರೆ ನಿಲ್ಲುವ ಒಳ್ಳೆಯ ಕುದುರೆ
ಓಡಿದರೋಡುವ ನನ್ನಿಯ ಕುದುರೆ
ಕಾಡದ ಬೇಡದ ಕರುಳಿನ ಕುದುರೆ
ನೋಡಲು ಬಿಡದಿಹ ಬೆತ್ತದ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
ಅರಬರ ದೇಶದಿ ದೊರೆಯದ ಕುದುರೆ
ಕಾಠೇವಾಡದಿ ಕಾಣದ ಕುದುರೆ
ಅರಸು ಮಕ್ಕಳಿಗೆ ಸಿಕ್ಕದ ಕುದುರೆ
ನನಗೇ ಸಿಕ್ಕಿದೆ ನನ್ನೀ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ
(ಕವಿ : ಸಿದ್ದಯ್ಯ ಪುರಾಣಿಕ )
***

Monday, September 15, 2008

ಡೊಳ್ಳು ಹೊಟ್ಟೆ ಗಣಪಣ್ಣ ..

ಡೊಳ್ಳು ಹೊಟ್ಟೆ ಗಣಪಣ್ಣ
ನಮ್ಮಯ ಮನೆಗೆ ಬಾರಣ್ಣ
ಆನೆಯ ಮೊಗವ ತೋರಣ್ಣ
ಇಲಿಯನು ಏರುತ ಬಾರಣ್ಣ
ಅಣ್ಣನು ತಳಿಯುವ ಪನ್ನೀರ
ನಾನು ತೊಡಿಸುವೆ ಹೂಹಾರ
ಅಪ್ಪನು ಆರತಿ ಮಾಡುವನು
ಅಮ್ಮನು ಶಂಖವ ಊದುವಳು
ತಮ್ಮನು ಜಾಗಟೆ ಬಡಿಯುವನು
ತಂಗಿಯು ಭಜನೆ ಮಾಡುವಳು
ಅಜ್ಜನು ಕೊಡುವನು ಕಜ್ಜಾಯ
ಅಜ್ಜಿಯು ಕೊಡುವಳು ಗೋಕ್ಷೀರ
ಚೌತಿಯ ದಿನವೇ ಬಾರಣ್ಣ
ಚಕ್ಕುಲಿ ಕಡಲೆ ನಿನಗಣ್ಣ
ಬೇಗನೆ ಬಾರೋ ಗಣಪಣ್ಣ
ಡೊಳ್ಳು ಹೊಟ್ಟೆ ಗಣಪಣ್ಣ
(ಕವಿ : ಕ.ಸುಬ್ರಹ್ಮಣ್ಯ ಭಟ್ )
***

Sunday, September 14, 2008

ಎಲ್ಲೋ ಹುಡುಕಿದೆ ..

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಪ್ರೇಮಗಳ
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲಿ .

(ಕವಿ : ಜಿ. ಎಸ್ .ಶಿವರುದ್ರಪ್ಪ )
***

Saturday, September 13, 2008

ಚಂದು ಮಾಮ


ಬಾ ಬಾ ಚಂದು ಮಾಮ
ಮುತ್ತು ಕೊಡು ಬಾ


ಕಬ್ಬು ಹೆಚ್ಚಿ ತಿರುಳೇ ಕೊಡುವೆ
ಮಾವು ಹೆಚ್ಚಿ ವಾಟೆ ಕೊಡುವೆ
ಬಾ ಬಾ ಚಂದು ಮಾಮ
ತಿಂಡಿ ತಿನ್ನು ಬಾ


ಕೌಲಿ ಹಾಲು ಕರೆಯಿಸಿ ಕೊಡುವೆ
ಹಾಲು ಕುಡಿಯಲು ಬಟ್ಟಲು ಕೊಡುವೆ
ಬಾ ಬಾ ಚಂದು ಮಾಮ
ಹಾಲು ಕುಡಿ ಬಾ


ತುಪ್ಪದ ದೀಪ ಹಚ್ಚಿ ಇಡುವೆ
ಪುಟ್ಟ ಪುಸ್ತಕ ಓದಲು ಕೊಡುವೆ
ಬಾ ಬಾ ಚಂದು ಮಾಮ
ಪಾಠ ಓದು ಬಾ


ಆಟದ ಸಾಮಾನೆಲ್ಲ ಕೊಡುವೆ
ನಿನ್ನ ಸಂಗಡ ಆಡುತಲಿರುವೆ
ಬಾ ಬಾ ಚಂದು ಮಾಮ
ಕೂಡಿ ಆಡು ಬಾ

(ಕವಿ : ಹೊಯಿಸಳ )
***

Friday, September 12, 2008

ಗುಬ್ಬಿ

ಗುಬ್ಬಿ ಗುಬ್ಬಿ
ಚಿಂವ್ ಚಿಂವ್ ಎಂದು
ಕರೆಯುವೆ ಯಾರನ್ನು ?
ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು ?
ಮೇಲೆ ಕೆಳಗೆ
ಕೊಂಕಿಸಿ ಕೊರಳನು
ಹುಡುಕುವೆ ಏನಲ್ಲಿ ?
ಕಾಳನು ಹುಡುಕುತ
ನೀರನು ನೋಡುತ
ಅಲೆಯುವೆ ಏಕಲ್ಲಿ ?
ಕಾಳನು ಕೊಟ್ಟು
ನೀರನು ಕುಡಿಸುವೆ
ಆಡಲು ಬಾ ಇಲ್ಲಿ
ಹಣ್ಣು ಕೊಟ್ಟು
ಹಾಲನು ನೀಡುವೆ
ನಲಿಯಲು ಬಾ ಇಲ್ಲಿ

(ಕವಿ: ಎ.ಕೆ. ರಾಮೇಶ್ವರ )
***

Thursday, September 11, 2008

ಕರಡಿಯ ಕುಣಿತ


ಕರಡಿಯ ತಕತಕ ಕುಣಿಸುತ ಬಂದನು
ಸಿದ್ದಿದ್ದಿ ಬಾವಾ ಬಾಲರ ಬಾವಾ
ಬಾವಾ ಬಾವಾ ಬಾಲರ ಜೀವಾ
ಕರಡಿಯ ಕುಣಿಸುತ ಬಾ ಬಾ
ಊರಿನ ಹುಡುಗರ ಹಿಗ್ಗನು ಹೆಚ್ಚಿಸಿ
ಉಬ್ಬಿಸಿ ಹಾರಿಸಿ ಬಾ ಬಾ
ಬಾವಾ ಬಾವಾ ಬಾಲರ ಜೀವಾ
ಕರಡಿಯ ಕೊರಳೊಳು ಕವಡೆಯ ಸರವು
ಕಾಲಿನ ಗೆಜ್ಜೆಯ ನುಡಿಸುತ ಬಾ
ಎರಡೇ ಕಾಲಲಿ ನಿಲ್ಲಿಸಿ ನಡೆಸುತ
ನಮ್ಮನು ನಗಿಸಲು ಬಾ ಬಾ
ಬಾವಾ ಬಾವಾ ಬಾಲರ ಜೀವಾ
ಮೂಗಿನ ಮೇಗಡೆ ಮುಂಗಾಲಿರಿಸಿ
ಸಲಾಮು ಹೊಡೆಸಲು ಬಾ ಬಾ
ಮೈಯ ಕೂದಲನು ಪಟ ಪಟ ಜಾಡಿಸಿ
ನಮ್ಮನು ನಲಿಸಲು ಬಾ ಬಾ
ಬಾವಾ ಬಾವಾ ಬಾಲರ ಜೀವಾ
ಡಮ ಡಮ ಡಮರುಗ ಬಾರಿಸಿ ಬಾವಾ
ಊರಿಗೆ ಊರನೆ ಎಬ್ಬಿಸಿ ಬಾ
ವರುಷಕ್ಕೊಮ್ಮೆ ಕರಡಿಯ ಕುಣಿಸಿ
ನಮ್ಮನು ನಗಿಸಲು ಬಾ ಬಾ
ಬಾವಾ ಬಾವಾ ಬಾಲರ ಜೀವಾ
ಕರಡಿಯ ಕುಣಿಸುತ ಬಾ ಬಾ
(ಕವಿ: ಸಿದ್ಧಯ್ಯ ಪುರಾಣಿಕ )
***

Wednesday, September 10, 2008

ಮೊದಲು ಕೆಲಸ ಮಾಡುವೆ

ಮಗು: ಇರುವೆ ಇರುವೆ ಕರಿಯ ಇರುವೆ

ನಾನು ಜೊತೆಗೆ ಬರುವೆ

ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ ತರುವೆ

ಇರುವೆ : ಮಳೆಯ ಕಾಲ ಬರುತಲಿಹುದು

ನನಗೆ ಸಮಯವಿಲ್ಲ

ಅನ್ನ ಕೂಡಿ ಹಾಕಿ ಇಟ್ಟು

ಕರೆಯ ಬರುವೆನಲ್ಲ !

ಮಗು : ನಾಯಿಮರಿ ನಾಯಿಮರಿ

ನಿನ್ನ ಜೊತೆಗೆ ಆಡುವೆ

ಕುಂಯ್ ಕುಂಯ್ ರಾಗ ಕಲಿಸು

ನಿನ್ನ ಹಾಗೆ ಹಾಡುವೆ

ನಾಯಿಮರಿ : ಆಡಲಿಕ್ಕೆ ಹಾಡಲಿಕ್ಕೆ

ನನಗೆ ಸಮಯವಿಲ್ಲ

ಅನ್ನ ಹಾಕಿದವನ ಮನೆಯ

ಕಾಯುತಿರುವೆನಲ್ಲ !

ಮಗು : ಜೇನು ಹುಳುವೆ ಜೇನು ಹುಳುವೆ

ಎಲ್ಲಿ ಹೋಗುತಿರುವೆ ?

ಕರೆದುಕೊಂಡು ಹೋಗು ನನ್ನ

ನಿನ್ನ ಜೊತೆಗೆ ಬರುವೆ

ಜೇನು ಹುಳ : ಬನವ ಸುತ್ತಿ ಸುಳಿದು ನಾನು

ಜೇನನರಸಿ ತರುವೆ

ಈಗ ಬೇಡ ಚೈತ್ರ ಬರಲಿ

ಆಗ ನಾನು ಕರೆವೆ !

ಮಗು : ಕುಹೂ ಕುಹೂ ಕೂಗುತಿರುವ

ಮಧುರ ಕಂಠ ಕೋಗಿಲೆ

ಎಲೆಯ ಬಲೆಯ ನೆಲೆಯೊಳಿರಲು

ನಾನು ಜೊತೆಗೆ ಬರುವೆ

ಕೋಗಿಲೆ : ಕಾಕ ದೃಷ್ಟಿ ತಪ್ಪಿಸಲ್ಕೆ

ಹೊಂಚಿನಲ್ಲಿ ಇರುವೆ

ಚೈತ್ರ ಕಳೆಯೆ ಒಂಟಿ ಇರುವೆ

ಆಗ ಕರೆಯ ಬರುವೆ

ಮಗು : ಯಾರು ಇವರು ನನ್ನ ಕೂಡೆ ಆಡಲಿಕ್ಕೆ ಒಲ್ಲರು

ತಮ್ಮ ತಮ್ಮ ಕೆಲಸದಲ್ಲಿ ವೇಳೆ ಕಳೆವರೆಲ್ಲರು

ಅವರ ಹಾಗೆ ಮೊದಲು ನನ್ನ ಕೆಲಸ ನಾನು ಮಾಡುವೆ

ಓದು ಬರಹ ಮುಗಿಸಿಕೊಂಡು ಸಮಯ ಉಳಿಯೆ ಆಡುವೆ !!

(ಕವಿ : ಸಿಸು ಸಂಗಮೇಶ )

***

ಯಾವುದು ಚಂದ ?

ನಗುತಿರುವ ಮಗು ಚಂದ
ಅರಳಿರುವ ಹೂ ಚಂದ
ಉದಯಿಸುವ ಸೂರ್ಯಬಿಂಬವು ಬಹಳ ಚಂದ

ಸತ್ಯ ಸದ್ಗುಣ ಚಂದ
ಶುದ್ಧ ಜೀವನ ಚಂದ
ದೇವರೊಲುಮೆಯು ಚಂದಕೆಲ್ಲ ಚಂದ

Tuesday, September 9, 2008

ಗಡಿಯಾರ

ಗಂಟೆಯ ನೆಂಟನೆ ಓ ಗಡಿಯಾರ
ಬೆಳ್ಳಿಯ ಬಣ್ಣದ ಗೋಳಾಕಾರ
ವೇಳೆಯ ತಿಳಿಯಲು ನೀನಾಧಾರ
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್
ಹಗಲೂ ಇರುಳೂ ಒಂದೇ ಬಾಳು
ನೀನಾವಾಗಲು ದುಡಿಯುವ ಆಳು
ಕಿವಿಯನು ಹಿಂಡಲು ನಿನಗದು ಕೂಳು
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್
ಮುಖ ಒಂದಾದರು ದ್ವಾದಶ ನೇತ್ರ !
ಮೂರು ಕೈಗಳು ಏನು ವಿಚಿತ್ರ !
ಯಂತ್ರ ಪುರಾಣದ ರಕ್ಕಸ ಪುತ್ರ !
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಎನ್ನುತ ಹೇಳುವೆಯೇನು ?
ನಿನ್ನೀ ಮಾತಿನ ಒಳಗುಟ್ಟೇನು?
"ಕಾಲವು ನಿಲ್ಲದು " ಎನ್ನುವಿಯೇನು ?
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್
ದುಡಿಯುವುದೊಂದೇ ನಿನ್ನಯ ಕರ್ಮ
ದುಡಿಸುವುದೊಂದೇ ನಮ್ಮಯ ಧರ್ಮ
ಇಂತಿರುವುದು ಕಲಿಯುಗದೀ ಧರ್ಮ
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್
(ಕವಿ : ದಿನಕರ ದೇಸಾಯಿ )
****

Monday, September 8, 2008

ಪಟಾಕಿ

ಅಪ್ಪನ ಜೇಬಿನ ದುಡ್ಡುಗಳೆಲ್ಲ
ಚಟಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಟ್ಟನೆ ದಾರಿಯ ಹಿಡಿಯುವುವು
ಬಗೆ ಬಗೆ ಬಣ್ಣದ ಹೂಗಳ ರೂಪದಿ
ಹಾರುತ ಬುಸು ಬುಸುಗುಟ್ಟುವುವು
ಉರಿಯನು ಸುರಿಸುತ ಮೊರೆಯುತ ತಿರುಗುತ
ಸರಸರನೆಲ್ಲೆಡೆ ಹರಿಯುವುವು
ಸರುವರ ಕಿವಿಗಳ ಕೊರೆಯುವುವು
ಮೂಗಿನ ಸೆಲೆಗಳನೊಡೆಯುವುವು
ಸಾರವ ತೆರೆಯುತ ಕಡೆಯಲಿ ಕಪ್ಪಗೆ
ನೆಲದಲಿ ದೊಪ್ಪನೆ ಕೆಡೆಯುವುವು
ಅಜ್ಜನ ಮಡಿಯನು ತೊಡೆಯುವುವು
ಅಪ್ಪನ ಜೇಬುಗಳೊಡೆಯುವುವು
ಸಿಡಿಯುವುವು ಸಿಡಿಯುವುವು
ಹರಿಯಿತು ಹರ್ಷವು ದೇಶದಿ
ದೀಪಾವಳಿ ಹಬ್ಬವು ತಾ ಬರುತಿರಲು
ಹೊರಲಾರದೆ ಸಾಹಸದಿ ಪಟಾಕಿಯ
ಹೊರೆಗಳ ಮೆಲ್ಲನೆ ತರುತಿರಲು
ಸಿಡಿವ ಚಟಾಕಿಯ ತರುತಿರಲು
ಹುಡುಗರು ನಲಿಯುತ ಕುಣಿಕುಣಿದಾಡುತ
ಹಿಡಿದು ಚಟಾಕಿಯ ಸುಡುತಿಹರು
ಸಿಡಿದು ಚಟಾಕಿಯು ಮೇಲಕೆ ಹಾರಲು
ನಿಲ್ಲದೆ ಚಪ್ಪಾಳೆ ತಟ್ಟುವರು
ಸಡಗರಗೊಳ್ಳುತ ದೂರದಿ ನೋಡುತ
ಲಲನೆಯರೆಲ್ಲರು ನಗುತಿಹರು
ಸಿಡಿಯೆ ಚಟಾಕಿಯು ನಗುತಿಹರು
ಅಪ್ಪನ ಜೇಬಿನ ದುಡ್ಡುಗಳೆಲ್ಲ
ಚಟಪಟಗುಟ್ಟುತ ಸಿಡಿಯುವುವು
ಒಪ್ಪದ ನೀತಿಯ ಮಾತುಗಳೆಲ್ಲ
ತಟ್ಟನೆ ದಾರಿಯ ಹಿಡಿಯುವುವು
(ಕವಿ : ಎಲ್. ಗುಂಡಪ್ಪ )
***

Sunday, September 7, 2008

ಅಂಚೆಯವನು



ಓಲೆಯ ಹಂಚಲು ಹೊರಡುವೆ ನಾನು

ತೋರಲು ಆಗಸದಲಿ ಬಿಳಿ ಬಾನು

ಮನೆಯಲಿ ನೀವು ಬಿಸಿಲಲಿ ನಾನು

ಕಾಗದ ಬಂತು ಕಾಗದವು



ಹೆಗಲಲಿ ಹಳದಿಯ ಹಸುಬೆಯ ನೀಡಿ

ಕಾಲಲಿ ಚರ್ಮದ ಜೋಡಿ

ತಲೆಯಲಿ ಖಾಕಿಯ ಪಗಡಿಯ ನೋಡಿ

ಕಾಗದ ಬಂತು ಕಾಗದವು



ಒಳಗಿಂದಲಿ ಜನರೆನ್ನನು ಕಂಡು

ಬೇಗನೆ ಹೊರ ಅಂಗಳಕೈತಂದು

ಕಾಗದವಿದೆಯೇ ಎನ್ನುವುದುಂಟು

ಕಾಗದ ಬಂತು ಕಾಗದವು



ಸೊಗಸಿನ ಸುದ್ದಿಯ ಕೊಡುವೆನು ನಿಮಗೆ

ವ್ಯಸನದ ವಾರ್ತೆಯ ಕೊಡುವೆನು ತಮಗೆ

ಎಲ್ಲ ಸುದ್ದಿಗಳೊಂದೇ ನಮಗೆ

ಕಾಗದ ಬಂತು ಕಾಗದವು



ಓಲೆಯ ಕೊಡುವಧಿಕಾರಿಯು ನಾನು

ಆದರು ಅದರಲಿ ಬರೆದುದು ಏನು

ಎಂಬುದನರಿಯದ ಬಲು ಸುಖಿ ನಾನು

ಕಾಗದ ಬಂತು ಕಾಗದವು

***

Saturday, September 6, 2008

ಜೇಡ ಮತ್ತು ನೊಣ ..




ಬಾ ನೊಣವೆ ಬಾ ನೊಣವೆ ಬಾ ನನ್ನ ಮನೆಗೆ
ಬಾನಿನೊಳು ಹಾರಿ ಬಲು ದಣಿವಾಯಿತೆ ನಿನಗೆ
ನೀನೊಮ್ಮೆ ಬಾ ನನ್ನ ಹೊಸಮನೆಯ ನೋಡು
ಈ ನೂಲಿನ ಚಾಪೆಯಲಿ ಬಂದು ಕೂಡು
ಆ ಮಾತಿಗಾ ನೊಣವು ಎಲೆ ಜೇಡ ಜೇಡ
ಈ ಮನೆಯೊಳುಪಚಾರ ಹಾ ಬೇಡ ಬೇಡ
ನೀ ಮಾಡಿದಾ ಚಾಪೆ ನನಗೊಂದು ದೂಪೆ
ಆ ಮರದ ತೂತು ಮನೆ ಇದೆ ಅಲ್ಲಿ ಪೋಪೆ
ಎಲೆ ನೊಣವೆ ನಿನ್ನ ತಿರುಗಾಟ ನೋಡಿ
ತಲೆ ತಿರುಗುತಿದೆ ಬಾರೋ ದಯಮಾಡಿ
ಎಲೆಯ ಹಾಕಿರುವೆ ನೀನುಂಡು ಸುಖಿಯಾಗು
ಮಲಗು ಎಳೆ ಹಾಸಿನಲಿ ಬಳಿಕೆದ್ದು ಹೋಗು
ನಿನ್ನಲ್ಲಿ ಉಂಡವನು ಬೇರೆ ಬಾಳುವನೇ
ನಿನ್ನಲ್ಲಿ ಮಲಗಿದವ ಮತ್ತೆ ಎಳುವನೆ
ನಿನ್ನ ಕಥೆಯನು ಹಿರಿಯರಿಂ ಕೇಳಿ ಬಲ್ಲೆ
ನಿನ್ನಲ್ಲಿ ಬರಲೊಲ್ಲೆ ನಾನು ಬರಲೊಲ್ಲೆ
ಅರರೆ ನೊಣಗೊಂಬೆ ಮೈಗೊಂದ ನಿಂಬೆ
ಹರಿನೀಲ ಕಣ್ಗೊ೦ಬೆ ನೋಡಿ ಸೊಗಗೊಂಬೆ
ಗರಿ ಪಚ್ಚೆಯಲಿ ತುಂಬೆ ಆಹಾ ಹೊಸತುಂಬೆ
ಸ್ವರವು ಝೇ೦ ಝೇ೦ ಎಂಬೆ ಮಧುರವನು ತುಂಬೆ
ಗಾಳಿಯೂದಿದ ಚೆಂಡು ಬಲು ಹಿಗ್ಗುವಂತೆ
ಬೀಳೆ ಕಿವಿಯಲಿ ಮಾತು ನೊಣವುಬ್ಬಿತ೦ತೆ
ಆಳ ನೋಡದ ಮಡುವಿನಲಿ ಧುಮುಕುವಂತೆ
ಬೋಳು ತಲೆ ನೊಣವು ಬಲೆಯಲಿ ಹಾರಿತಂತೆ
ಕಳ್ಳ ಜೇಡನ ಮಾರಿ ಬಳಿಕೊಂದು ಬಾರಿ
ಪಿಳ್ಳೆ ನೊಣ ಮೈಯೇರಿ ಮುಳ್ಳುಗಳ ತೂರಿ
ಚಿಳ್ಳೆ೦ದು ವಿಷಕಾರಿ ನೆತ್ತರನು ಹೀರಿ
ಕೊಳ್ಳೆ ಹೊಡೆಯಲು ನೊಣವು ಸತ್ತಿತೈ ಚೀರಿ
(ಕವಿ : ಪಂಜೆ ಮಂಗೇಶರಾಯರು )
***
( ಈ ಹಾಡಿನ ಪೂರ್ಣ ಪಾಠವನ್ನು ಒದಗಿಸಿದ ಶ್ರೀ ರಾಜಕುಮಾರ್ ಮತ್ತು ಶ್ರೀ ನಾರಾಯಣ ಗಟ್ಟಿ ಯವರಿಗೆ ಕೃತಜ್ಞತೆಗಳು)

ಬಾರೆ ಹೋಗುವ ಸಾಗುವ ....

ನಮ್ಮ ಊರಿನ
ಜಾತ್ರೆ ಈ ದಿನ
ಬಾರೆ ಹೋಗುವ ಸಾಗುವ !
ಅಮ್ಮ ಬರುವಳು
ಅಕ್ಕ ಬರುವಳು
ಬಾರೆ ಹೋಗುವ ಸಾಗುವ !
ಅಪ್ಪ ಬರುವನು
ಅಣ್ಣ ಬರುವನು
ಬಾರೆ ಹೋಗುವ ಸಾಗುವ !
ತಮ್ಮ ಬರುವನು
ತಂಗಿ ಬರುವಳು
ಬಾರೆ ಹೋಗುವ ಸಾಗುವ !
ಮಾವ ಬರುವನು
ಬಾವ ಬರುವನು
ಬಾರೆ ಹೋಗುವ ಸಾಗುವ !
ದುಡ್ಡು ಕೊಡುವರು
ಲಡ್ಡು ಕೊಡುವರು
ಬಾರೆ ಹೋಗುವ ಸಾಗುವ !!
(ಕವಿ : ಹೊನ್ನಯ್ಯ ಶೆಟ್ಟಿ )
***

Friday, September 5, 2008

ಬೆಣ್ಣೆ ಕದ್ದ ನಮ್ಮ ಕೃಷ್ಣ ..

ಬೆಣ್ಣೆ ಕದ್ದ ನಮ್ಮ ಕೃಷ್ಣಾ ಬೆಣ್ಣೆ ಕದ್ದನಮ್ಮ
ಬೆಣ್ಣೆಯ ಕದ್ದು ಜಾರುತ ಬಿದ್ದು ಮೊಳಕಾಲೂದಿಸಿಕೊಂಡನಮ್ಮ
ಬಿಂದಿಗೆ ಬಿದ್ದು ಸಿಡಿಯಲು ಸದ್ದು ಬೆಚ್ಚಿದ ರಾಧೆಯ ಗಂಡನಮ್ಮ
ತಾಯಿ ಬಂದಳೋಡಿ , ಕಳ್ಳನ ಕಣ್ಣಿನಲ್ಲಿ ಕೋಡಿ
ಕಣ್ಣಲಿ ಆಕೆ ಸಿಟ್ಟನು ತಾಳಿ ಸೊಂಟಕೆ ಕೈಯಿಟ್ಟು
ಆದಳು ಅರೆಚಣ ಭೀಕರ ತಾಳಿ ದುರುದುರು ಕಣ್ಣಿಟ್ಟು
ಹಣೆ ತುಂಬ ಕೆನ್ನೆಗೆ ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆ
ಇಳಿಯಿತು ಕೋಪ ಅರಳಿತು ಕೆಂದುಟಿ ತುಂಟನ ನೋಟಕ್ಕೆ
ತಪ್ಪಿದ ದಂಟಕೆ ನಿಟ್ಟುಸಿರೆಳೆದ ಬೆಣ್ಣೆಗಳಾ ನೀಲಾ
ತಟ್ಟನೆ ಅಳುವುದ ನಿಲ್ಲಿಸಿ ಬಾಯಗಲಿಸಿ ಬಾಲ
ಹರಡಿದ ಬೆಳದಿಂಗಳ ಜಾಲ ಅರಳಿದ ಬೆಳದಿಂಗಳ ಲಾಲ
ಅವನ ಆ ಕುಟಿಲ ಬೆಣ್ಣೆಯಂಥ ನಗು ಕಾಯಲಿ ಜಗದವರಾ
ಸಂತತ ನಗಿಸಲಿ ನಗದವರ
(ಕವಿ : ಕೆ. ಎಸ್ .ನಿಸಾರ್ ಅಹಮದ್ )
***

ಚಂದಿರನೇತಕೆ ಓಡುವನಮ್ಮ...

ಚಂದಿರನೇತಕೆ ಓಡುವನಮ್ಮ
ಮೋಡಕೆ ಹೆದರಿಹನೇ
ಬೆಳ್ಳಿಯ ಮೋಡದ ಅಲೆಗಳ ಕಂಡು
ಚಂದಿರ ಬೆದರಿಹನೆ?
ಹಿಂಜಿದ ಅರಳೆಯು ಗಾಳಿಗೆ ಹಾರಿ
ಮೋಡಗಳಾಗಿಹವೇ?
ಅರಳೆಯು ಮುತ್ತಿ ಮೈಯನು ಸುತ್ತಿ
ಚಂದ್ರನ ಬಿಗಿಯುವವೇ?
ಮಂಜಿನಗಡ್ಡೆಯ ಮೋಡವು ಕರಗಲು
ಚಂದಿರ ನಗುತಿಹನು
ಕರಗಿದ ಮೋಡದ ಸೆರೆಯನು ಹರಿಯುತ
ಬಾನಲಿ ತೇಲುವನು
ಚಂದಿರನೆನ್ನಯ ಗೆಳೆಯನು ಅಮ್ಮಾ
ನನ್ನೊಡನಾಡುವನು
ನಾನೂ ಓಡಲು ತಾನೂ ಓಡುವ
ಚೆನ್ನಿಗ ಚಂದಿರನು
ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ

(ಕವಿ :ನೀ . ರೆ. ಹೀರೇಮಠ )

****

Thursday, September 4, 2008

ಸಾರುತಿದೆ ಸೃಷ್ಟಿ

ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ
ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ
ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಾರುತಿದೆ ಸೃಷ್ಟಿಯಿದು ಸವಿಯಾಗು ಎಂದು
ಸವಿಯಾಗು ಸವಿಯಾಗು ಸವಿಯಾಗು ಎಂದು !
ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ
ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ
ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ
ಸಾರುತಿದೆ ಸೃಷ್ಟಿಯಿದು ಛವಿಯಾಗು ಎಂದು
ಛವಿಯಾಗು ಛವಿಯಾಗು ಛವಿಯಾಗು ಎಂದು !
ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ
ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ
ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ
ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು
ಕವಿಯಾಗು ಕವಿಯಾಗು ಕವಿಯಾಗು ಎಂದು !!
(ಕವಿ : ಕಾವ್ಯಾನಂದ )
****