Wednesday, December 5, 2012

ಗಿಳಿಯ ಮರಿಯನು ತಂದು...


ಗಿಳಿಯ ಮರಿಯನು ತಂದು ಪಂಜರ | ದೊಳಗೆ  ಪೋಷಿಸಿ
ಕಲಿಸಿ ಮೃದು ನುಡಿಗಳನು ಲಾಲಿಸಿ | ಕೇಳ್ವ ಪರಿಣತರಂತೆ ನೀನೆನಗೆ ||
ತಿಳುಹಿ ಮತಿಯನು ಎನ್ನ ಜಿಹ್ವೆಗೆ | ಮೊಳಗುವಂದದಿ ನಿನ್ನ ನಾಮಾ|
ವಳಿಯ ಪೊಗಳಿಕೆಯಿತ್ತು  ರಕ್ಷಿಸು  ನಮ್ಮ ನನವರತ ||

ಹಸಿವರಿತು ತಾಯ್ತನ್ನ ಶಿಶುವಿಗೆ | ಒಸೆದು ಪಾಲ್ಗೊಡುವಂತೆ ನೀ |
 ಪೋಷಿಸಿದೆ ಬೇರಿನ್ನಾರು ಪೋಷಕರಾಗಿ ಸಲಹುವರು ||
ಬಸಿರೊಳಗೆ  ಬ್ರಹ್ಮಾಂಡ ಕೋಟಿಯ| ಪಸರಿಸಿದ  ಪರಮಾತ್ಮ  ನೀನೆಂ|
ದುಸುರುತಿವೆ  ವೇದಗಳು ರಕ್ಷಿಸು  ನಮ್ಮ ನನವರತ ||

ನೀರ ಮೇಲಣ ಗುಳ್ಳೆಯಂದದಿ| ತೋರಿಯಡಗುವ ದೇಹವೀ ಸಂ |
ಸಾರ ಬಹಳಾರ್ಣವದೊಳಗೆ  ಮುಳುಗಿದೆನು ಪತಿಕರಿಸಿ ||
ತೋರಿಸಚಲಾನಂದ ಪದವಿಯ | ಸೇರಿಸಕಟಾ  ನಿನ್ನವೊಲು ನಮ|
ಗಾರು ಬಾಂಧವರು0ಟು ರಕ್ಷಿಸು  ನಮ್ಮ ನನವರತ ||

ಮರೆದೆನಭ್ಯುದಯದಲಿ ನಿಮ್ಮನು | ಮರೆಯೆನಾಪತ್ತಿನಲಿ ಪೊರೆಯೆಂ |
ದೆರೆಯುವೆನು  ಮನವೆಕಭಾವದೊಳಿಲ್ಲ ನಿಮ್ಮಡಿಯ ||
ಮರೆದು ಬಾಹಿರನಾದವನ  ನೀ| ಮರೆವರೇ  ಹಸು ತನ್ನ ಕಂದನ |
ಮರೆವುದೇ ಮಮತೆಯಲಿ ರಕ್ಷಿಸು  ನಮ್ಮ ನನವರತ ||

ದೀನ ನಾನು ಸಮಸ್ತ ಲೋಕಕೆ | ದಾನಿ ನೀನು ವಿಚಾರಿಸಲು ಮತಿ|
ಹೀನ ನಾನು  ಮಹಾಮಹಿಮ  ಕೈವಲ್ಯಪತಿ ನೀನು ||
ಏನ ಬಲ್ಲೆನು ನಾನು ನೆರೆ ಸು | ಜ್ಞಾನ ಮೂರುತಿ ನೀನು  ನಿನ್ನ ಸ |
ಮಾನರುಂಟೇ ದೇವ ರಕ್ಷಿಸು  ನಮ್ಮ ನನವರತ ||

 ***
( ಕನಕದಾಸ ವಿರಚಿತ ಹರಿಭಕ್ತಿಸಾರದಿಂದ ಆಯ್ದ ಭಾಮಿನಿ ಪದಗಳು )

2 comments:

Unknown said...

ಇವೆಲ್ಲ ಅದ್ಭುತ ಹಾಗೂ ಅಮೋಘ

Unknown said...

ಇದನ್ನು ನಾವು ಜಂಗಮರೂ, ಅಂದರೆ ಅಯನೋರೂ ಹಾಡುತ್ತಾರೆ