ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ
ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ
ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಾರುತಿದೆ ಸೃಷ್ಟಿಯಿದು ಸವಿಯಾಗು ಎಂದು
ಸವಿಯಾಗು ಸವಿಯಾಗು ಸವಿಯಾಗು ಎಂದು !
ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ
ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ
ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ
ಸಾರುತಿದೆ ಸೃಷ್ಟಿಯಿದು ಛವಿಯಾಗು ಎಂದು
ಛವಿಯಾಗು ಛವಿಯಾಗು ಛವಿಯಾಗು ಎಂದು !
ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ
ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ
ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ
ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು
ಕವಿಯಾಗು ಕವಿಯಾಗು ಕವಿಯಾಗು ಎಂದು !!
(ಕವಿ : ಕಾವ್ಯಾನಂದ )
****
1 comment:
ತುಂಬಾ ಧನ್ಯವಾದ.
ಎಲೆ ಗಡಿಯಾರವೆ ನಿನ್ನಾಕರವೆ ಪದ್ಯ-ನಾನು ಹುಡುಕುತ್ತಿದ್ದೇನೆ ಆದರೆ ಸಿಗುತ್ತಿಲ್ಲ
Post a Comment