skip to main | skip to sidebar

ನವನೀತ

ಮುಗ್ಧ ಮನಸಿನ ಸುಪ್ತ ಸಂತೋಷ ....

Tuesday, March 26, 2019

ಸ್ವಾಮಿ ದೇವನೆ ಲೋಕ ಪಾಲನೆ

ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ|
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ||
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ|
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ||

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ|
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ||
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ|
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ||

ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ|
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು||
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ|
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ  ಪೋದುದೊ ಕತ್ತಲೆ||

ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ|
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ||
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ|
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ||

ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ|
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ||
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ|
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು||

ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ|
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ||
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ|
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ||

ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ|
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ||
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ|
ದೀನಪಾಲನೆ ನಿನ್ನ ಧೀನದೊಳಿರ್ಪನಮ್ಮನು ಪಾಲಿಸೈ||

ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ|
ಭೂಮಿಯಲ್ಲಿ ಯಮಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ||
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ|
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ||

-ಸೋಸಲೆ ಅಯ್ಯಾ ಶಾಸ್ತ್ರಿಗಳು




Posted by ಸುಬ್ರಹ್ಮಣ್ಯ ಭಟ್ at 4:09 PM No comments:

Tuesday, March 20, 2018

ವಸಂತ ಬಂದ!
ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಪೆಣ್ಗಳ ಕುಣಿಸುತ ನಿಂದ,
ಚಳಿಯನು ಕೊಂದ ಹಕ್ಕಿಗಳುಲಿತವೆ ಚೆಂದ,
ಹಕ್ಕಿಗಳುಲಿತವೆ ಚಂದ
ಕೂವೂ ಜಗ್‌ ಜಗ್‌ ಪುವ್ವೀ ಟೂವಿಟ್ಟವೂ !
ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ; ಬನದಲಿ ಬೆಳದಿಂಗಳೂಟ,
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಠ,
ಕೂವೂ ಜಗ್‌ ಜಗ್‌ ಪುವ್ವೀ ಟೂವಿಟ್ಟವೂ !
ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೂವೂ ಜಗ್‌ ಜಗ್‌ ಪುವ್ವೀ ಟೂವಿಟ್ಟವೂ !
ಬಂದ ವಸಂತ! ನಮ್ಮ ರಾಜ ವಸಂತ !
(Original English poem Thomas Nashe ; ಕನ್ನಡಕ್ಕೆ: ಬಿ ಎಂ ಶ್ರೀಕಂಠಯ್ಯ)

Posted by ಸುಬ್ರಹ್ಮಣ್ಯ ಭಟ್ at 1:00 PM No comments:

Friday, February 6, 2015

ಪ್ರಾರ್ಥನೆ


ಅಖಿಲಾಂಡ ಮಂಡಲದೊಳು ರೂಪ ತಾಳಿ
ಅದರೊಳಗೆ ಆನಂದ ರೂಪವ ಬೀರಿ
ಅಣುರೇಣು  ತೃಣ ಕಾಷ್ಠವೆಲ್ಲವ ಸೇರಿ
ಪರಮಾತ್ಮರೂಪನೆ  ನಮಿಪೆವು ಬಾಗಿ

ಮನುಜನ ದಿನಪನ ತಾರೆಯನೆಲ್ಲ
ಧರೆಯೊಳಗೆ ತೋರುವ ಪ್ರಾಣಿ ಯನೆಲ್ಲ
ಅನುದಿನವು ಎಡೆಬಿಡದೆ ಕಾಯುವರಾರು
ಅವಗೆಮ್ಮ ಕಾಣಿಕೆ ನೀಡುವ ಬಾರೊ

ಜಯ ಜಯ ಕರುಣೆಯ ಕಣಜವೇ ಜಯತು
ಜಯಜಯ ಜ್ಯೋತಿಯ ಪುಂಜವೇ ಜಯತು
ಜಯ ಜಯ ಮಂಗಳ ಮೂರ್ತಿಯೇ ಜಯತು
ಜಯ ಜಯ ಸತ್ಯ ಸ್ವರೂಪನೆ  ಜಯತು

                                                    Photo courtesy : Sri Shivaram H Doddamani
Posted by ಸುಬ್ರಹ್ಮಣ್ಯ ಭಟ್ at 9:30 AM 3 comments:

Thursday, August 22, 2013

ನಮ್ಮ ಪುಟ್ಟ

ಪುಟ್ಟನೊಂದು  ಬಾಳೆಹಣ್ಣು  ಸುಲಿದು ತಿಂದನು 
ಸುಲಿದು ತಿಂದು ಸಿಪ್ಪೆಯನ್ನು ನೆಲಕೆ ಒಗೆದನು 
ಪುಟ್ಟನೊಡನೆ ಮಾತನಾಡೆ  ನಾಣಿ ಬಂದನು 
ಓಡಿ  ಬಂದು ಸಿಪ್ಪೆ ತುಳಿಯೆ  ಜಾರಿ ಬಿದ್ದನು 
ಹಿಡಿದು ಪುಟ್ಟನವನ ಜುಟ್ಟು ಏಟು ಕೊಟ್ಟನು 
ತಪ್ಪನರಿತ ಪುಟ್ಟ ಸಿಪ್ಪೆಯನ್ನು  ತಿಪ್ಪೆಗೆಸೆದನು 
ಜಾಣ ಬಾಲನಂತೆ  ತನ್ನ ಮನೆಗೆ ನಡೆದನು 
                                                                                                     -ಮಂಜೇಶ್ವರ ಗೋವಿಂದ ಪೈ 
Posted by ಸುಬ್ರಹ್ಮಣ್ಯ ಭಟ್ at 9:58 AM No comments:

Tuesday, February 19, 2013

ರೈತ ಗೀತೆ

ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ.

ಲೋಕದೊಳೇನೇ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ:
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೆ ಇಲ್ಲ.

ಬಾಳಿತು ನಮ್ಮೀ ನಾಗರಿಕತೆ ಸಿರಿ
ಮಣ್ಣುಣಿ ನೇಗಿ
ಲಿನಾಶ್ರಯದಿ;
ನೇಗಿಲ ಹಿಡಿದಾ ಕೈಯಾಧಾರದಿ
ದೊರೆಗಳು ದರ್ಪದೊಳಾಳಿದರು.
ನೇಗಿಲ ಬಲದೊಳು ವೀರರು ಮೆರೆದರು,
ಶಿಲ್ಪಿಗಳೆಸೆದರು, ಕವಿಗಳು ಬರೆದರು.

ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ  ಅನ್ನವನೀಯುವನು.
ಹೆಸರು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ.
ನೇಗಿಲಕು
ಲದೊಳಗಡಗಿದೆ ಕರ್ಮ;
ನೇಗಿಲ ಬಲವೇ ನಮ್ಮಯ ಧರ್ಮ 
Posted by ಸುಬ್ರಹ್ಮಣ್ಯ ಭಟ್ at 10:04 AM 1 comment:

Wednesday, December 5, 2012

ಗಿಳಿಯ ಮರಿಯನು ತಂದು...


ಗಿಳಿಯ ಮರಿಯನು ತಂದು ಪಂಜರ | ದೊಳಗೆ  ಪೋಷಿಸಿ
ಕಲಿಸಿ ಮೃದು ನುಡಿಗಳನು ಲಾಲಿಸಿ | ಕೇಳ್ವ ಪರಿಣತರಂತೆ ನೀನೆನಗೆ ||
ತಿಳುಹಿ ಮತಿಯನು ಎನ್ನ ಜಿಹ್ವೆಗೆ | ಮೊಳಗುವಂದದಿ ನಿನ್ನ ನಾಮಾ|
ವಳಿಯ ಪೊಗಳಿಕೆಯಿತ್ತು  ರಕ್ಷಿಸು  ನಮ್ಮ ನನವರತ ||

ಹಸಿವರಿತು ತಾಯ್ತನ್ನ ಶಿಶುವಿಗೆ | ಒಸೆದು ಪಾಲ್ಗೊಡುವಂತೆ ನೀ |
 ಪೋಷಿಸಿದೆ ಬೇರಿನ್ನಾರು ಪೋಷಕರಾಗಿ ಸಲಹುವರು ||
ಬಸಿರೊಳಗೆ  ಬ್ರಹ್ಮಾಂಡ ಕೋಟಿಯ| ಪಸರಿಸಿದ  ಪರಮಾತ್ಮ  ನೀನೆಂ|
ದುಸುರುತಿವೆ  ವೇದಗಳು ರಕ್ಷಿಸು  ನಮ್ಮ ನನವರತ ||

ನೀರ ಮೇಲಣ ಗುಳ್ಳೆಯಂದದಿ| ತೋರಿಯಡಗುವ ದೇಹವೀ ಸಂ |
ಸಾರ ಬಹಳಾರ್ಣವದೊಳಗೆ  ಮುಳುಗಿದೆನು ಪತಿಕರಿಸಿ ||
ತೋರಿಸಚಲಾನಂದ ಪದವಿಯ | ಸೇರಿಸಕಟಾ  ನಿನ್ನವೊಲು ನಮ|
ಗಾರು ಬಾಂಧವರು0ಟು ರಕ್ಷಿಸು  ನಮ್ಮ ನನವರತ ||

ಮರೆದೆನಭ್ಯುದಯದಲಿ ನಿಮ್ಮನು | ಮರೆಯೆನಾಪತ್ತಿನಲಿ ಪೊರೆಯೆಂ |
ದೆರೆಯುವೆನು  ಮನವೆಕಭಾವದೊಳಿಲ್ಲ ನಿಮ್ಮಡಿಯ ||
ಮರೆದು ಬಾಹಿರನಾದವನ  ನೀ| ಮರೆವರೇ  ಹಸು ತನ್ನ ಕಂದನ |
ಮರೆವುದೇ ಮಮತೆಯಲಿ ರಕ್ಷಿಸು  ನಮ್ಮ ನನವರತ ||

ದೀನ ನಾನು ಸಮಸ್ತ ಲೋಕಕೆ | ದಾನಿ ನೀನು ವಿಚಾರಿಸಲು ಮತಿ|
ಹೀನ ನಾನು  ಮಹಾಮಹಿಮ  ಕೈವಲ್ಯಪತಿ ನೀನು ||
ಏನ ಬಲ್ಲೆನು ನಾನು ನೆರೆ ಸು | ಜ್ಞಾನ ಮೂರುತಿ ನೀನು  ನಿನ್ನ ಸ |
ಮಾನರುಂಟೇ ದೇವ ರಕ್ಷಿಸು  ನಮ್ಮ ನನವರತ ||

 ***
( ಕನಕದಾಸ ವಿರಚಿತ ಹರಿಭಕ್ತಿಸಾರದಿಂದ ಆಯ್ದ ಭಾಮಿನಿ ಪದಗಳು )
Posted by ಸುಬ್ರಹ್ಮಣ್ಯ ಭಟ್ at 2:13 PM 2 comments:

Tuesday, September 4, 2012

ಗೆಳೆಯನಿಗೆ ಕರೆ


ಮಾವಿನ ಮರದಲಿ
ಮೆರೆಯುವ ಹಣ್ಣನು
ಮುದದಲಿ ಸವಿಯುವ
ಬಾ ಗೆಳೆಯ

ಬೀಸುವ ಗಾಳಿಗೆ
ಬೀಳುವ ಹಣ್ಣನು
ಮೆಲ್ಲುತ ಸವಿಯುವ
ಬಾ ಗೆಳೆಯ

ಕಲ್ಲನು ಹೆಕ್ಕುತ
ಗೆಲ್ಲನು ನೋಡುತ
ಸರ್ರನೆ ಎಸೆಯುವ
ಬಾ ಗೆಳೆಯ

ಸಂಜೆಯ ಹೊತ್ತಲಿ
ಬಯಲಿನ ಬದಿಯಲಿ
ಹಣ್ಣನು ಸವಿಯುವ
ಬಾ ಗೆಳೆಯ
Posted by ಸುಬ್ರಹ್ಮಣ್ಯ ಭಟ್ at 11:26 AM No comments:
Older Posts Home
Subscribe to: Posts (Atom)

counter

free hit counter
hit counter

ತಾಣ -ಯಾನ

  • ಪ್ರಸಂಗಾವಲೋಕನ
  • ಬಲ್ಲಿರೇನಯ್ಯ

Blog Archive

  • ▼  2019 (1)
    • ▼  March (1)
      • ಸ್ವಾಮಿ ದೇವನೆ ಲೋಕ ಪಾಲನೆ ಸ್ವಾಮಿದೇವನೆ ಲೋಕಪಾಲನೆ ತ...
  • ►  2018 (1)
    • ►  March (1)
  • ►  2015 (1)
    • ►  February (1)
  • ►  2013 (2)
    • ►  August (1)
    • ►  February (1)
  • ►  2012 (2)
    • ►  December (1)
    • ►  September (1)
  • ►  2011 (2)
    • ►  May (1)
    • ►  March (1)
  • ►  2010 (9)
    • ►  October (1)
    • ►  July (1)
    • ►  June (2)
    • ►  May (1)
    • ►  March (2)
    • ►  January (2)
  • ►  2009 (64)
    • ►  December (3)
    • ►  November (2)
    • ►  October (1)
    • ►  September (2)
    • ►  August (8)
    • ►  July (6)
    • ►  June (13)
    • ►  May (5)
    • ►  April (4)
    • ►  March (9)
    • ►  February (4)
    • ►  January (7)
  • ►  2008 (104)
    • ►  December (15)
    • ►  November (24)
    • ►  October (17)
    • ►  September (27)
    • ►  August (21)
 
free hit counter
hit counter

ನಾನು ....

My photo
ಸುಬ್ರಹ್ಮಣ್ಯ ಭಟ್
ಉಜಿರೆಯಲ್ಲಿ ಹೊಟ್ಟೆಪಾಡಿಗಾಗಿ ಉಪನ್ಯಾಸಕ. ಒಂದಿಷ್ಟು ಬರೆಯುವುದು , ಯಕ್ಷಗಾನ ಆಸ್ವಾದನೆ ನನ್ನ ಹವ್ಯಾಸ .
View my complete profile