Wednesday, December 5, 2012

ಗಿಳಿಯ ಮರಿಯನು ತಂದು...


ಗಿಳಿಯ ಮರಿಯನು ತಂದು ಪಂಜರ | ದೊಳಗೆ  ಪೋಷಿಸಿ
ಕಲಿಸಿ ಮೃದು ನುಡಿಗಳನು ಲಾಲಿಸಿ | ಕೇಳ್ವ ಪರಿಣತರಂತೆ ನೀನೆನಗೆ ||
ತಿಳುಹಿ ಮತಿಯನು ಎನ್ನ ಜಿಹ್ವೆಗೆ | ಮೊಳಗುವಂದದಿ ನಿನ್ನ ನಾಮಾ|
ವಳಿಯ ಪೊಗಳಿಕೆಯಿತ್ತು  ರಕ್ಷಿಸು  ನಮ್ಮ ನನವರತ ||

ಹಸಿವರಿತು ತಾಯ್ತನ್ನ ಶಿಶುವಿಗೆ | ಒಸೆದು ಪಾಲ್ಗೊಡುವಂತೆ ನೀ |
 ಪೋಷಿಸಿದೆ ಬೇರಿನ್ನಾರು ಪೋಷಕರಾಗಿ ಸಲಹುವರು ||
ಬಸಿರೊಳಗೆ  ಬ್ರಹ್ಮಾಂಡ ಕೋಟಿಯ| ಪಸರಿಸಿದ  ಪರಮಾತ್ಮ  ನೀನೆಂ|
ದುಸುರುತಿವೆ  ವೇದಗಳು ರಕ್ಷಿಸು  ನಮ್ಮ ನನವರತ ||

ನೀರ ಮೇಲಣ ಗುಳ್ಳೆಯಂದದಿ| ತೋರಿಯಡಗುವ ದೇಹವೀ ಸಂ |
ಸಾರ ಬಹಳಾರ್ಣವದೊಳಗೆ  ಮುಳುಗಿದೆನು ಪತಿಕರಿಸಿ ||
ತೋರಿಸಚಲಾನಂದ ಪದವಿಯ | ಸೇರಿಸಕಟಾ  ನಿನ್ನವೊಲು ನಮ|
ಗಾರು ಬಾಂಧವರು0ಟು ರಕ್ಷಿಸು  ನಮ್ಮ ನನವರತ ||

ಮರೆದೆನಭ್ಯುದಯದಲಿ ನಿಮ್ಮನು | ಮರೆಯೆನಾಪತ್ತಿನಲಿ ಪೊರೆಯೆಂ |
ದೆರೆಯುವೆನು  ಮನವೆಕಭಾವದೊಳಿಲ್ಲ ನಿಮ್ಮಡಿಯ ||
ಮರೆದು ಬಾಹಿರನಾದವನ  ನೀ| ಮರೆವರೇ  ಹಸು ತನ್ನ ಕಂದನ |
ಮರೆವುದೇ ಮಮತೆಯಲಿ ರಕ್ಷಿಸು  ನಮ್ಮ ನನವರತ ||

ದೀನ ನಾನು ಸಮಸ್ತ ಲೋಕಕೆ | ದಾನಿ ನೀನು ವಿಚಾರಿಸಲು ಮತಿ|
ಹೀನ ನಾನು  ಮಹಾಮಹಿಮ  ಕೈವಲ್ಯಪತಿ ನೀನು ||
ಏನ ಬಲ್ಲೆನು ನಾನು ನೆರೆ ಸು | ಜ್ಞಾನ ಮೂರುತಿ ನೀನು  ನಿನ್ನ ಸ |
ಮಾನರುಂಟೇ ದೇವ ರಕ್ಷಿಸು  ನಮ್ಮ ನನವರತ ||

 ***
( ಕನಕದಾಸ ವಿರಚಿತ ಹರಿಭಕ್ತಿಸಾರದಿಂದ ಆಯ್ದ ಭಾಮಿನಿ ಪದಗಳು )

Tuesday, September 4, 2012

ಗೆಳೆಯನಿಗೆ ಕರೆ


ಮಾವಿನ ಮರದಲಿ
ಮೆರೆಯುವ ಹಣ್ಣನು
ಮುದದಲಿ ಸವಿಯುವ
ಬಾ ಗೆಳೆಯ

ಬೀಸುವ ಗಾಳಿಗೆ
ಬೀಳುವ ಹಣ್ಣನು
ಮೆಲ್ಲುತ ಸವಿಯುವ
ಬಾ ಗೆಳೆಯ

ಕಲ್ಲನು ಹೆಕ್ಕುತ
ಗೆಲ್ಲನು ನೋಡುತ
ಸರ್ರನೆ ಎಸೆಯುವ
ಬಾ ಗೆಳೆಯ

ಸಂಜೆಯ ಹೊತ್ತಲಿ
ಬಯಲಿನ ಬದಿಯಲಿ
ಹಣ್ಣನು ಸವಿಯುವ
ಬಾ ಗೆಳೆಯ