Thursday, February 26, 2009

ಶ್ ! ಸದ್ದು ಮಾಡದಿರಿ



ಶ್ ! ಸದ್ದು ಮಾಡದಿರಿ

ಏನೋ ಪರಿಮಳ ಬರುತಲಿದೆ

ತಿಂಡಿಯ ಪರಿಮಳ ಬರುತಲಿದೆ !



ಅಮ್ಮನು ಒಲೆಯಲಿ ಕರಿಯುತಲಿರಲು

ಬೇಗನೆ ತಿಂಡಿಯು ಸಿಗಲಿದೆ ನಮಗೆ !



ಅಪ್ಪನು ತಂದ ಬಾಳೇ ಕಾಯಿ

ಅಕ್ಕನು ತೆಳ್ಳಗೆ ತುಂಡರಿಸಿ

ಕುದಿಯುವ ಎಣ್ಣೆಗೆ ಬಿಡುವ ಪರಿಮಳ

ತೇಲಿ ಬರುತಿದೆ ಈ ಕಡೆಗೆ !


ಶ್ ! ಸದ್ದು ಮಾಡದಿರಿ
ತಿಂಡಿಯ ಪರಿಮಳ ಬರುತಲಿದೆ !


***


Wednesday, February 25, 2009

ಅಹಾ ! ಗೊಂಬೆ



ಆಹಾ ! ಎಷ್ಟು ಮುದ್ದಿನ ಗೊಂಬೆ
ನೋಡಲು ಬಲು ಅಂದ


ನಿನ್ನ ಕೈಯ್ಯಲಿ ತಿರುಗುವ ಗೊಂಬೆ
ಆಡಲು ಬಲು ಚೆಂದ


ಮಿರಮಿರ ಮಿಂಚುವ ಮುದ್ದಿನ ಗೊಂಬೆ
ಕಾಣಲು ಬಲು ಅಂದ


ನನಗೆ ಕೊಡುವೆಯಾ ಆಡಲು ಅದನು
ಪಡೆಯುವೆ ಆನಂದ


ನಾನೂ ತಮ್ಮನು ಸೇರುತ ಆಡಲು
ಕೊಡುವೆಯ ನಮಗೀಗ ?


ಆಹಾ ! ಎಷ್ಟು ಮುದ್ದಿನ ಗೊಂಬೆ
ನೋಡಲು ಬಲು ಅಂದ

***



Thursday, February 12, 2009

ಬಾಲ ಮುದ್ದು ಕೃಷ್ಣ



ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಂದನು ಮುದ್ದು ಕೃಷ್ಣ
ಬೆಣ್ಣೆ ಮುದ್ದೆ ಕದ್ದು
ತಿನ್ನೋ ಕಳ್ಳ ಕೃಷ್ಣ !


ನವಿಲ ಗರಿಯ ಸೊಗಸಿಗೆ
ಮನಸೋತ ಕೃಷ್ಣ
ತೆಗೆದು ತಲೆಯೊಳಿರಿಸಿ
ಮೆರೆವ ಪುಟಾಣಿ ಕೃಷ್ಣ


ಬಾರೋ ಬಾರೋ ನನ್ನ ಬಳಿ
ಬೇಗನೆ ಕೃಷ್ಣ
ಹಾಲು ಮೊಸರು ಬೆಣ್ಣೆ ಕೊಡುವೆ
ತಿನ್ನೋ ಕೃಷ್ಣ
(ಕವಿ :ಸುಬ್ರಹ್ಮಣ್ಯ ಭಟ್)
***

Wednesday, February 11, 2009

ಎಣ್ಣೆ ಹೊಯ್ಯಮ್ಮ ದೀಪಕ್ಕೆ.....



ಎಣ್ಣೆ ಹೊಯ್ಯಮ್ಮ ದೀಪಕ್ಕೆ
ಬತ್ತಿ ಒಣಗುತ್ತಿದೆ ಬೆಳಕು ಬಾಡುತ್ತಿದೆ
ಕತ್ತಲೆ ಮುಂದೆ ಮುಂದೊತ್ತಿದೆ
ಅತ್ತಲಿ೦ದಿತ್ತಲು ಕಂಡಿಯೊಳಗೆ ನುಗ್ಗಿ
ಒತ್ತರದಲಿ ಗಾಳಿ ಬೀಸುತ್ತಿದೆ :ಎಣ್ಣೆ :


ಹೊರಗಲ್ಲಿ ಗಿಡ ಮರ ಕೊಂಬೆ ರೆ೦ಬೆಗಳು
ಬಡಿದಾಡಿಕೊಂಡು ಭೋರಿಡುತ್ತಿವೆ
ಪಡು ಬಾನ ಕಾರ್ಮುಗಿಲರಿಯೊ೦ದದ೦ನೆ
ಕುಡು ಮಿಂಚಿನಲಿ ಗಹಗಹಿಸುತ್ತಿದೆ :ಎಣ್ಣೆ :


ಹಸಿದ ಮಕ್ಕಳು ಬಟ್ಟಲೆನ್ನದು ತನ್ನದೆಂ
ದೆಳೆದಾಡಿಕೊಂಡು ಗುದ್ದಾಡುತ್ತಿವೆ
ಹಿರಿಯರ ಸಂಧ್ಯಾವಂದನೆ ಸಾಹಿತ್ಯ
ಕಡೆಗಾಲೊಳೆಡವಿ ಚೆಲ್ಲಾಡುತ್ತಿವೆ :ಎಣ್ಣೆ :


ಗೋಡೆಯ ಬಳಿಯಿಂದ ಹಸಿರು ಕಣ್ಣಿನ ಭೂತ
ಹಾಲಾಳಗೆಯ ಬಳಿ ಸಾರುತ್ತಿದೆ
ಗೂಡಿನ ಗಿಳಿ ಹೆಸರೆತ್ತಿ ಕರೆದು ಕೀರಿ
ಕಾಣಾದೆ ನಿನ್ನ ಕಂಗೆಡುತ್ತಲಿದೆ

ಎಣ್ಣೆ ಹೊಯ್ಯಮ್ಮ ದೀಪಕ್ಕೆ...


(ಕವಿ :ಸೇಡಿಯಾಪು ಕೃಷ್ಣ ಭಟ್ )


***

Friday, January 16, 2009

ನಾಯಿ ಮರಿ

ತೋಟದ ಮನೆಯ
ಪಕ್ಕದ ಗೂಡಲಿ
ನಾಯಿ ಮರಿ ಕುಳಿತಿತ್ತು
ಹಾರುತ ಬಂದ
ಮಂಗನ ನೋಡಿ
ಕುಂಯ್ ಕುಂಯ್ ಅಂದಿತ್ತು
ಅಮ್ಮ ನಾಯಿಯು
ಇದನು ಕಂಡು
ಓಡುತ ಬಂದಿತ್ತು
ಮರದ ಮೇಲಿನ
ಮಂಗನ ಕಂಡು
ಬೌ ಬೌ ಬೊಗಳಿತ್ತು
ನಾಯಿಯ ಕಂಡು
ಮಂಗನು ಬೇಗನೆ
ಓಡಲು ತೊಡಗಿತ್ತು
ಅಮ್ಮ ನಾಯಿಯು
ಮರಿಯನು ನೆಕ್ಕುತ
ಮುದ್ದು ಮಾಡಿತ್ತು .
***

Wednesday, January 14, 2009

ಮಾವಿನ ಮರ



ರುಚಿ ರುಚಿ ಮಾವಿನ
ಹಣ್ಣನು ಕೊಡುವ
ಮಾವಿನ ಮರವೇ ಅಂದ


ತಣ್ಣನೆ ನೆರಳನು
ನೀಡುವ ಮರದ
ಚಿಗುರೆಲೆ ನೋಡಲು ಚ೦ದ


ತಳಿರಿನ ನಡುವೆ
ಮರಿ ಕೋಗಿಲೆಯು
ಹಾಡನು ಹಾಡಲು ಅಂದ


ಬೀಸುವ ಗಾಳಿಗೆ
ಬೀಳುವ ಹಣ್ಣನು
ಹೆಕ್ಕುತ ಸವಿಯಲು ಆನಂದ !


***


Thursday, January 8, 2009

ಸಂಕ್ರಾಂತಿ ಹಬ್ಬ



ಹಬ್ಬವೇ ಹಬ್ಬವು
ಸಂಕ್ರಾಂತಿ ಹಬ್ಬವು
ಬರುತಿದೆ ನೋಡಣ್ಣ

ಎಳ್ಳು ಬೆಲ್ಲ ಸೇವಿಸಿ
ನಾವು ಹಾಡುತ
ನಲಿಯುವ ಬಾರಣ್ಣ

ಸಂಕ್ರಾಂತಿ ಹೂವಿನ
ದಂಡೆಯ ಹಿಡಿದು
ಆಟವನಾಡೋಣ

ಬೆಟ್ಟದ ಮೇಲಿನ
ಗಣಪನ ಗುಡಿಗೆ
ಓಡುತ ಹೋಗೋಣ

ಭಟ್ಟರು ಕೊಡುವ
ಅಪ್ಪ ಮೋದಕವ
ಸವಿಯನು ಸವಿಯೋಣ

ಹಬ್ಬವೇ ಹಬ್ಬವು
ಸಂಕ್ರಾಂತಿ ಹಬ್ಬವು
ಬರುತಿದೆ ನೋಡಣ್ಣ
***