ಚಿನ್ನದ ನಾಡು ಗಂಧದ ಬೀಡು
ಜೇನಿನ ಗೂಡಿದು ಕನ್ನಡವು
ಸುಂದರ ವನಗಳ ಚೆಂದದ ಹೊಲಗಳ
ಚೆಲುವಿನ ನಾಡಿದು ಕನ್ನಡವು
ಜುಳು ಜುಳು ಹರಿಯುವ ತೊರೆಗಳ ಕಲರವ
ಮೊರೆಯುವ ನಾಡಿದು ಕನ್ನಡವು
ತೆಂಗು ಕಂಗು ಬಾಳೆ ತಾಳೆಗಳ
ತೋಟದ ಸೊಬಗಿನ ಕನ್ನಡವು
ನವಿಲಿನ ನರ್ತನ ಕೋಗಿಲೆ ಕೂಜನ
ಶುಕಧ್ವನಿ ಮೊಳಗಿದ ಕನ್ನಡವು
ಕಪಿಗಳ ದಂಡು ಆನೆಯ ಹಿಂಡು
ಖಗ ಮೃಗ ತಳಕಿನ ಕನ್ನಡವು
ರಾಜಾಧಿರಾಜರು ಆಳಿದ ನಾಡು
ವೈಭವ ಮೆರೆದಿಹ ಕನ್ನಡವು
ಕವಿ ಪುಂಗವರು ಬಾಳಿದ ನಾಡು
ಸಾಹಿತ್ಯ ಸ್ಪೂರ್ತಿಯ ಕನ್ನಡವು
ಸಂಸ್ಕೃತಿ ಕಲೆಗಳು ತುಳುಕಿದ ನಾಡು
ಸುಖ ಶಾಂತಿ ನೆಲೆಸಿದ ಕನ್ನಡವು
ಶರಣರು ಸಂತರು ಬದುಕಿದ ನಾಡು
ಪುಣ್ಯ ಭೂಮಿಯಿದು ಕನ್ನಡವು
-ಆರ್. ಎಸ . ಚಾಪಗಾವಿ
No comments:
Post a Comment