Wednesday, October 14, 2009

ನದಿ



ಕಲ ಕಲ ಸದ್ದನು
ಮಾಡುತ ಮೆಲ್ಲನೆ
ಹರಿಯುವ ಸುಂದರ ನದಿ

ನೀರವ ಕಾಡಿನ
ನಡುವೆ ಸಾಗುತ
ಸೇರುವೆ ಸಾಗರ ತುದಿ

ಸಾಗುವ ದಾರಿಗೆ
ವೇಗವ ಪಡೆಯುತ
ಧುಮ್ಮುಕ್ಕುವ ಝರಿ

ಲೋಕದ ಜನರ
ಜೀವನ ಬೆಳಗಲು
ಸಂಪದ ನೀಡುವ ನದಿ

ಪಾಪವ ಕಳೆಯೆ
ಸ್ನಾನವ ವಿರಚಿಸೆ
ಶುದ್ಧ ತೀರ್ಥವೀ ನದಿ
***

Tuesday, September 29, 2009

ಕುಂಬಳಕಾಯಿ



ದೊಡ್ಡ ದೊಡ್ಡ ಕುಂಬಳಕಾಯಿ
ಪೂಜೆಗೆ ಬೇಕು ಕುಂಬಳಕಾಯಿ

ಪಲ್ಯಕೆ ಬೇಕು ಕುಂಬಳಕಾಯಿ
ಮಜ್ಜಿಗೆ ಹುಳಿಗೆ ಕುಂಬಳಕಾಯಿ

ಅಜ್ಜನ ನೆನಪಿಗೆ ಕುಂಬಳಕಾಯಿ
ಅಜ್ಜಿಯ ತಿಥಿಗೆ ಕುಂಬಳಕಾಯಿ

ರುಚಿ ರುಚಿ ಹಲ್ವಕೆ ಕುಂಬಳಕಾಯಿ
ದೇಹದ ತಂಪಿಗೆ ಕುಂಬಳಕಾಯಿ
***

Monday, September 7, 2009

ವಿಮಾನ ..









ಗಗನದಿ ಹಾರುತ
ಸದ್ದನು ಮಾಡುತ
ಹೋಗುವ ಪುಟ್ಟ ವಿಮಾನ

ದೊಡ್ಡ ರೆಕ್ಕೆಯ
ಲೋಹದ ಹಕ್ಕಿಯೆ?
ಗಗನದಿ ಗಮಿಸುವ ವಿಮಾನ

ಊರಿಂದ ಊರಿಗೆ
ಕ್ಷಣದಲಿ ಸಾಗುವ
ಗಗನ ಗಾಮಿಯೆ ವಿಮಾನ

ದೇಶ ವಿದೇಶವ
ಸುತ್ತುತಾ ಬರಲು
ನೀ ಉಪಕಾರಿಯೇ ವಿಮಾನ

ಕಾಯುವೆ ನಾನು
ನಿನ್ನನು ಏರಲು
ಹಾರುವೆ ಮುಗಿಲೆಡೆ ವಿಮಾನ
***

Wednesday, August 26, 2009

ಚಕ್ಕುಲಿ..


ಚಕ್ಕುಲಿ ಚಕ್ಕುಲಿ
ಬಿಸಿ ಬಿಸಿ ಚಕ್ಕುಲಿ


ಅಮ್ಮನು ಮಾಡಿದ
ಗುಂಡನೆ ಚಕ್ಕುಲಿ


ಅಕ್ಕನು ಮಾಡಿದ
ಕಡ್ಡಿಯ ಚಕ್ಕುಲಿ

ಬಾಯಲಿ ಕರಗುವ
ಬೆಣ್ಣೆ ಚಕ್ಕುಲಿ


ಕೆಂಪಗೆ ಕರಿದ
ಗರಿ ಗರಿ ಚಕ್ಕುಲಿ


ಚಕ್ಕುಲಿ ಚಕ್ಕುಲಿ
ಬಿಸಿ ಬಿಸಿ ಚಕ್ಕುಲಿ
***

Tuesday, August 25, 2009

ಗಣಪನ ಹಬ್ಬ...



ಮಣ್ಣಿನ ಗಣಪನ
ವಿಗ್ರಹ ಮಾಡಿ
ಎತ್ತರ ಪೀಠದಿ ಕುಳ್ಳಿರಿಸಿ

ಬಗೆ ಬಗೆಯಲಿ
ಸಿಂಗರಿಸಿದ ಮಂಟಪ
ಅಂದದಿ ಊರಲಿ ಮೆರೆದಿರಲು

ಚಕ್ಕುಲಿ ಕಡುಬು
ಮೋದಕ ಪಾಯಸ
ಬಗೆಬಗೆ ಕಜ್ಜಾಯ ತಿನಿಸುಗಳು

ಕಬ್ಬು ಕಡಲೆ
ಅರಳು ಗರಿಕೆ
ಎಲ್ಲವ ಗಣಪನ ಮುಂದಿಡಲು

ಊರಿನ ಹಿರಿಯರು
ಕಿರಿಯರು ಗೆಳೆಯರು
ಮಾತೆಯರೆಲ್ಲ ಸೇರಿರಲು

ಹಾಡನು ಹಾಡಿ
ಆರತಿ ಬೆಳಗಿ
ಪೂಜೆಯ ಮಾಡಿ ಕೈಮುಗಿದು

ಸರತಿಯ ಸಾಲಲಿ
ಎಲ್ಲರು ನಿಲ್ಲಲು
ಪಂಚಕಜ್ಜಾಯ ವಿತರಿಸಲು

ವಿಧ ವಿಧ ಆಟವ
ಆಡುತ ಜನರು
ಮೋದದಿ ಎಲ್ಲ ಸೇರುತಲಿ

ಗಣಪನ ಹಬ್ಬಕೆ
ಊರಿಗೆ ಊರೇ
ಸಡಗರದಿಂದ ನೆರೆದಿತ್ತು
***

Thursday, August 20, 2009

ಬೆಳವಣಿಗೆ..



ಹನಿ ಹನಿ ಸೇರಿ
ದೊಡ್ಡ ಶರಧಿಯಾಯಿತು



ಕಾಳು ಕಾಳು ಸೇರಿ
ದೊಡ್ಡ ಕಣಜವಾಯಿತು



ದಿನ ದಿನವು ಉಳಿಸೆ
ಹಣದ ಮೊತ್ತವಾಯಿತು



ದೀಪದಿಂದ ದೀಪ ಬೆಳಗಿ
ಬೆಳಕು ಹೆಚ್ಚಿತು



ದಿನಕ್ಕೊಂದು ವಿಷಯ ಕಲಿಯೆ
ಜ್ಞಾನ ಬೆಳೆಯಿತು .

***

Wednesday, August 12, 2009

ಜಾರುಬಂಡಿ

ಶಾಲೆಯ ಬದಿಯಲಿ
ಆಟದ ಬಯಲಲಿ
ಜಾರುಬಂಡಿಯ ಮಾಡಿಹರು


ಸಂಜೆಯ ವೇಳೆಗೆ
ಆಟದ ಸಮಯಕೆ
ಜಾರುವ ಆಟವನಾಡುವೆವು


ಗೆಳೆಯರು ನಾನೂ
ಬಂಡಿಯ ಮೇಲಕೆ
ಹತ್ತುತ ಜಾರುತಲಿರುತಿಹೆವು


ಆಡುತ ಕುಣಿಯುತ
ಪಾಠವ ಓದುತ
ಜಾಣರಾಗಿ ಬಾಳುವೆವು .

***