Tuesday, May 26, 2009

ಮಳೆ - ಬೆಳೆ ...



ಬಾನಿನಿಂದ ಭುವಿಗೆ ಬಂತು
ತುಂತುರು ಮಳೆ


ರೈತರೆಲ್ಲ ಹರುಷಗೊಂಡು
ಬೆಳೆದರೆಲ್ಲ ಬೆಳೆ


ಬೆಳೆಯು ಬೆಳೆಯೆ ಗದ್ದೆಯಿಂದ
ಹಸಿರಾಯ್ತು ಇಳೆ


ಕಳೆಯು ತೆಗೆಯೆ ಗದ್ದೆಯಿಂದ
ಶುದ್ಧವಾಯ್ತು ಬೆಳೆ

***

Saturday, May 16, 2009

ಮುಚ್ಚು ಮರೆಯಿಲ್ಲದೆಯೆ .....



ಮುಚ್ಚು ಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ ಅಂತರಾತ್ಮ ..ಮುಚ್ಚು..



ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ
ಗಂಗೆ ತಾನೋದ್ಭವಿಪ ನಿನ್ನಡಿಯ ಸೋಕಿಂಗೆ
ನರಕ ತಾನುಳಿಯುವುದೆ ನರಕವಾಗಿ ..ಮುಚ್ಚು ..



ಶಾಂತ ರೀತಿಯೊಳಿಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೊ ಓ ಅನಂತ
ನನ್ನ ನೀತಿಯ ಪುರುಡಿನಿಂದೆನ್ನ ರಕ್ಷಿಸೆ
ನಿನ್ನ ನೀತಿಯ ಬೆಳಕಿನ ಆನಂದಕ್ಕೆ ...ಮುಚ್ಚು ...

-ಕುವೆಂಪು

***

Wednesday, May 13, 2009

ಮಂಗಳ ಪದ್ಯ ...



ಜಲದಲಿ ಮತ್ಸ್ಯವತಾರನಿಗೆ

ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ

ಧರೆಯನುದ್ಧರಿಸಿದ ವರಾಹವತಾರಗೆ

ತರಳನ ಕಾಯ್ದ ನರಸಿಂಹನಿಗೆ

ಭೂಮಿಯ ದಾನವ ಬೇಡಿದಗೆ

ಆ ಮಹಾ ಕ್ಷತ್ರಿಯರ ಗೆಲಿದವಗೆ

ರಾಮಚಂದಿರನೆಂಬ ದಶರಥ ಸುತನಿಗೆ

ಭಾಮೆಯರರಸ ಗೋಪಾಲನಿಗೆ

ಬತ್ತಲೆ ನಿಂತಿಹ ಬೌದ್ಧನಿಗೆ

ಅರ್ತಿಯಿ೦ದ ಹಯವೇರಿದ ಕಲ್ಕ್ಯನಿಗೆ

ಹತ್ತವತಾರದಿ ಭಕ್ತರ ಪೊರೆಯುವ

ಅಚ್ಚ್ಯುತ ಪುರಂದರ ವಿಠಲನಿಗೆ . ಮಂಗಳಂ

-ಪುರಂದರದಾಸರು


(ಶಾಲೆಯಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿದ್ದ "ಭಜನೆ" ಯಲ್ಲಿ ಹಾಡುತ್ತಿದ್ದ ಮಂಗಳ ಪದ್ಯ )

***

Wednesday, May 6, 2009

ಎತ್ತಿನ ಗಾಡಿ ....


ಗಡ ಗಡ ಗಡ ಗಡ ಸದ್ದನು ಮಾಡಿ
ಬರುತಿದೆ ನೋಡಿ ಎತ್ತಿನ ಗಾಡಿ


ಎತ್ತುಗಳೆರಡನು ಮುಂದಕೆ ಹೂಡಿ
ಕೈಯಲಿ ಕೋಲನು ಹಿಡಿದರೆ ನೋಡಿ


ಎಳೆಯುತ ಗಾಡಿಯ ಮುಂದಕೆ ಓಡಿ
ತಲುಪಿಪ ಗುರಿಯ ತಾ ಜತೆಗೂಡಿ


ಹಿಗ್ಗನು ಕುಗ್ಗನು ಭಾಗವ ಮಾಡಿ
ಹೊರುವವು ನಮಗೆ ಸುಖವನು ನೀಡಿ


ಈ ಪರಿ ಗಾಡಿಯ ನೀತಿಯ ನೋಡಿ
ಲೋಕಕೆ ಪಾಠವ ಕಲಿಸುವ ಮೋಡಿ
****

Monday, May 4, 2009

ಕಾಡಿಗೆ ಹೋಗೋಣ .....



ತಂಪಿನ ಮರಗಳ
ಗುಂಪಿನ ಬಳಿಯ
ಕಾಡಿಗೆ ಹೋಗೋಣ .


ಬೆಳೆದ ಬಿದಿರ
ಮೆಳೆಗಳ ನೋಡುತ
ಆಟವನಾಡೋಣ


ಕಿಚ ಪಿಚ ಸದ್ದನು
ಮಾಡುವ ಹಕ್ಕಿಯ
ನೋಡೋಣ


ಕಾಡಲಿ ಸಿಗುವ
ಮಾವಿನ ಹಣ್ಣನು
ಹೆಕ್ಕುತ ಸವಿಯೋಣ


ಹಸಿರಿನ ಬನದ
ಅಂದವ ನೋಡಿ
ಪುಳಕಿತರಾಗೋಣ

***